ಶಿವಮೊಗ್ಗ: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಸರ್ಕಾರದ ಆಯವ್ಯಯ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಮೊಗ್ಗ ಜಿಲ್ಲೆಗೂ ಕೆಲವೊಂದು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
1. ಸೋಗಾನೆ ವಿಮಾನ ನಿಲ್ದಾಣದ ಸಮೀಪ ಆಹಾರ ಪಾರ್ಕ್ ನಿರ್ಮಾಣ.
2. ಮುಂದಿನ 4 ವರ್ಷಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳನ್ನು ಒದಗಿಸಲು ಕ್ರಮ.
3. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಬೊಮ್ಮನಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ನಲ್ಲಿ ಮೇಲ್ಸೇತುವೆ ನಿರ್ಮಾಣ.
4. ಶಿವಮೊಗ್ಗದಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಆಯನೂರಿನ ತಾರಾಲಯಕ್ಕೆ ಚಾಲನೆ.
5. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯಗಳ ಸ್ಥಾಪನೆ.
6. 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ.
7. ಭದ್ರಾವತಿಯಲ್ಲಿ ಅತ್ಯಾಧುನಿಕ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣ.
ಸಿಹಿಗಿಂತ ಕಹಿನೇ ಹೆಚ್ಚು-ಹೆಚ್.ಆರ್.ಬಸವರಾಜಪ್ಪ: ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಸಿಹಿಗಿಂತ ಕಹಿನೇ ಜಾಸ್ತಿ ಇದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಬರಗಾಲ ಇರುವ ಕಾರಣ ರೈತರ ಸಾಲ ಮನ್ನಾ ಮಾಡಬೇಕು. ಎಕರೆಗೆ 20 ಸಾವಿರ ರೂ. ಪರಿಹಾರ ಒದಗಿಸಬೇಕು. ಹಿಂದೆ ತಂದಂತಹ ಕಾಯಿದೆಗಳನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕೆಂಬುದು ನಮ್ಮ ಬೇಡಿಕೆ. ಆದರೆ ಈ ಬಜೆಟ್‌ನಲ್ಲಿ ಎಪಿಎಂಸಿ ಕಾಯಿದೆಯನ್ನು ರದ್ದುಮಾಡಿದೆ. ಸಾಲ ಮನ್ನಾ ಮಾಡಿಲ್ಲ. 5 ಲಕ್ಷದವರೆಗೂ ಬಡ್ಡಿರಹಿತ ಸಾಲ ಮೊದಲೇ ಇತ್ತು. ಈಗ ಅದನ್ನು ಮುಂದುವರೆಸಿದ್ದಾರೆ ಎಂದರು.
ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವ ಮಿತಿಯನ್ನು 10ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಹಾಗೂ ಪಿಎಲ್ಡಿ ಬ್ಯಾಂಕ್ನ ದೀರ್ಘಾವಧಿ ಸಾಲದ ಬಡ್ಡಿಯನ್ನು ಮನ್ನಾ ಮಾಡಿದ್ದಾರೆ ಇದು ಸ್ವಾಗತರ್ಹ ಎಂದು ಹೇಳಿದರು.
ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡುಗೆಯನ್ನು ನೀಡಿಲ್ಲ. ಮೆಗ್ಗಾನ್ ಆಸ್ಪತ್ರೆಗೆ ಬೇಕಾದ ಮೂಲಸೌಕರ್ಯ ಸೇರಿದಂತೆ ಇತರೆ ವೈದ್ಯಕೀಯ ಸೇವೆಗೆ ಆದ್ಯತೆ ನೀಡಬೇಕಿತ್ತು. ಬೊಮ್ಮನಕಟ್ಟೆ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಹಣ, ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಹೈಟೆಕ್ ಸೆಕ್ಯೂರಿಟಿಗೆ ಹಣ ಮೀಸಲು ಇಡಲಾಗಿದೆ. ವಿಮಾನ ನಿಲ್ದಾಣದ ಬಳಿ ಫುಡ್ಪಾರ್ಕ್ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
''ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಸಿದ್ದರಾಮಯ್ಯನವರ ಬಜೆಟ್ ಮಹಿಳೆಯರಿಗೆ ತೃಪ್ತಿ ತಂದಿದೆ. ಬಜೆಟ್ನಿಂದ ನಮಗೆ ಮನೋಬಲ ಹಾಗೂ ಆತ್ಮಬಲ ನೀಡಿದೆ. ಶಕ್ತಿ ಯೋಜನೆ ನೀಡಿ ಮಹಿಳೆಯರನ್ನು ಸದೃಢಗೊಳಿಸಿದೆ'' ಎಂದು ಶಿವಮೊಗ್ಗದ ಗೃಹಿಣಿ ಅನಿತಾ ತಿಳಿಸಿದ್ದಾರೆ.
ಉಚಿತ ವಿದ್ಯುತ್ ಹಾಗೂ ಪ್ರತಿ ಮಹಿಳೆಯರಿಗೆ ಎರಡು ಸಾವಿರ ರೂ. ನೀಡುತ್ತಿರುವುದು ಎಲ್ಲಾ ಮಹಿಳೆಯರಿಗೂ ಸಂತಸ ತಂದಿದೆ. ಗ್ಯಾರಂಟಿ ಯೋಜನೆಗೆ ಸರ್ಕಾರ 29 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಯುವಕ-ಯುವತಿಯರಿಗೆ ವೇತನ ನೀಡುವ ಮೂಲಕ ಅವರ ಆತ್ಮಬಲ ಹೆಚ್ಚಾಗುವಂತೆ ಮಾಡಿದೆ. ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚಲು ಗ್ರಾಮ ಮಟ್ಟದಲ್ಲಿ ಪರೀಕ್ಷೆಗೆ ಅವಕಾಶ ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದೆ. ಅವರ ಹೋರಾಟ ಈಗ ಸಫಲವಾಗಿದೆ. ಮುಂದೆ ಇವರಿಗೆ ಇನ್ಶ್ಯೂರೆನ್ಸ್ ಸಹ ಸಿಗಬೇಕಿದೆ ಎಂದರು.
ಇದನ್ನೂ ಓದಿ: ಬಜೆಟ್‌ನಲ್ಲಿ 'ಭೂ ಸುರಕ್ಷಾ ಯೋಜನೆ' ಘೋಷಣೆ: ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ