ಬೆಂಗಳೂರು : ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು ಚುನಾವಣೆಗೆ ಸ್ಪರ್ಧಿಸಲು ಒಲವು ತೋರದ ಕಾರಣ ನನಗೆ ಟಿಕೆಟ್ ಸಿಕ್ಕಿದೆ ಅಂತಲ್ಲ. ನನ್ನ ಹೆಸರು ಮೊದಲಿಗೆ ಇರಲಿಲ್ಲ ಎನ್ನುವುದು ನಿಜವಾದರೂ, ಹಾಲಿ ಸಂಸದರು ಸ್ಪರ್ಧೆಗೆ ನಿರಾಸಕ್ತಿ ತೋರಿದ್ದರಿಂದ ಸ್ಥಳೀಯ ನಾಯಕರ ಅಪೇಕ್ಷೆಯಂತೆ ಪಕ್ಷ ನನಗೆ ಟಿಕೆಟ್ ನೀಡಿದೆ. ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಯಾವತ್ತೂ ಕೂಡ ನಾನು ರಾಜಕೀಯಕ್ಕೆ ಬರುತ್ತೇನೆ, ತನಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಅವರು ಧರ್ಮದ ಕೆಲಸ ಮಾಡಿಕೊಂಡು ಮಠದ ಅಭಿವೃದ್ಧಿ ಮಾಡಿಕೊಂಡು ಭಕ್ತರ ಬೇಕು ಬೇಡಗಳಿಗೆ ಸ್ಪಂದಿಸಿ ಕೆಲಸ ಮಾಡುವ ಇಚ್ಛೆಯಲ್ಲಿದ್ದಾರೆ. ಹಾಗಾಗಿ ಇಲ್ಲಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವ ಚಿಂತನೆ ಇತ್ತು ಎನ್ನುವುದು ಅಪ್ರಸ್ತುತವಾಗಲಿದೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನನ್ನ ಹೆಸರು ಮೊದಲಿಗೆ ಬರುವ ವಿಚಾರ ಇರಲಿಲ್ಲ. ಅಲ್ಲಿ ಹಾಲಿ ಸಂಸದ ಕೇಂದ್ರ ಸಚಿವ ನಾರಾಯಣಸ್ವಾಮಿ ಮುಂದುವರೆಬೇಕು ಎನ್ನುವ ಇಚ್ಛೆ ಎಲ್ಲರದ್ದೂ ಆಗಿತ್ತು. ಆದರೆ ನಾರಾಯಣಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಉತ್ಸಾಹದಲ್ಲಿದ್ದಾರೆ. ಹಾಗಾಗಿ ಈ ಬಾರಿ ಸ್ಪರ್ಧೆ ಮಾಡಲ್ಲ ಎಂದಾಗ ಚಿತ್ರದುರ್ಗದ ಸಂಸದರು, ಶಾಸಕರು, ಮಾಜಿ ಶಾಸಕರು ಪದಾಧಿಕಾರಿಗಳೆಲ್ಲರೂ ಗೋವಿಂದ ಕಾರಜೋಳ ಅನುಭವಸ್ಥರಿದ್ದಾರೆ, 30 ವರ್ಷದಿಂದ ಅವರನ್ನು ನೋಡಿದ್ದೇವೆ, ಅದಕ್ಕೆ ಅವರಾದರೆ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನನ್ನ ಹೆಸರು ಶಿಫಾರಸು ಮಾಡಿದ್ದರು. ಪಕ್ಷದ ವರಿಷ್ಠರೂ ಅದಕ್ಕೆ ಸಹಮತ ನೀಡಿ ಚಿತ್ರದುರ್ಗ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ನನಗೆ ಗೋ ಬ್ಯಾಕ್ ಚಳವಳಿ ಎದುರಾಗುವ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದಲ್ಲಿ ಯುವಕರು ಸಾಕಷ್ಟು ಜನ ರಾಜಕಾರಣದಲ್ಲಿದ್ದಾರೆ. ಅವರು ಚುನಾವಣೆಗೆ ನಿಲ್ಲಬೇಕು, ಟಿಕೆಟ್ ಕೊಡಿ ಎಂದು ಕೇಳಿದ್ದರಲ್ಲಿ ತಪ್ಪೇನಿಲ್ಲ. ಸಾಕಷ್ಟು ಸಮಯ ಕೆಲಸ ಮಾಡಿದವರು ಸಹಜವಾಗಿ ಟಿಕೆಟ್ ಸಿಗಬೇಕು ಎಂದು ಕೇಳುತ್ತಾರೆ. ಪಕ್ಷದ ವರಿಷ್ಠರು ತೀರ್ಮಾನ ಮಾಡಿದ ನಂತರ ಎಲ್ಲರೂ ಒಟ್ಟಾಗಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಲಿದ್ದಾರೆ. ಖಂಡಿತವಾಗಿ ನನ್ನ ಗೆಲುವಿಗೆ ಅವರೆಲ್ಲರೂ ಸಹಕರಿಸಿ ಕೆಲಸ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ. ಕಾರ್ಯಕರ್ತರು ಸ್ವಾಭಾವಿಕವಾಗಿ ಟಿಕೆಟ್ ಕೇಳಿದ್ದಾರೆ. ಆ ರೀತಿ ಕೇಳಬೇಕು. ಪಕ್ಷ ಬಲಾಢ್ಯವಿದ್ದು, ಗೆದ್ದು ಬರುವ ಸಾಧ್ಯತೆ ಇದ್ದಾಗ ಆಕಾಂಕ್ಷಿಗಳು ಹೆಚ್ಚಿರುತ್ತಾರೆ. ಕೇಳಿದ್ದು ತಪ್ಪಲ್ಲ. ಅವರನ್ನು ಅಭಿನಂಧಿಸುತ್ತೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಕಾರಜೋಳ ಭರವಸೆ ನೀಡಿದ್ದಾರೆ.
ಪಕ್ಷದ ವಿಚಾರಗಳು ಯಾವ ರೀತಿ ಇರುತ್ತವೆ ಎಂದರೆ ಕೆಲವೊಮ್ಮೆ ಪ್ರಾದೇಶಿಕ ಸಮಸ್ಯೆ ಮತ್ತು ಅನುಭವಸ್ಥರನ್ನು ಹುಡುಕಿ ಲೋಕಸಭೆಗೆ ಕಳಿಸಬೇಕು ಎನ್ನುವ ನಿರ್ಧಾರ ಮಾಡಿರುತ್ತಾರೆ. ಯಾವುದೇ ಪಕ್ಷದಲ್ಲಿ ಪಕ್ಷದ ಕಾರ್ಯಕರ್ತರಿಗೆ ಪಕ್ಷ ಎನ್ನುವುದು ತಾಯಿ ಇದ್ದ ಹಾಗೆ. ಪಕ್ಷದ ಆದೇಶಗಳನ್ನು ಧಿಕ್ಕರಿಸುವ ಶಕ್ತಿ ನಮಗಿರಲ್ಲ. ತಾಯಿ ಮಾತು ಕೇಳಿದ ರೀತಿ ಪಕ್ಷದ ವರಿಷ್ಠರ ಮಾತನ್ನು ಪಕ್ಷದ ನಿರ್ಣಯಗಳನ್ನು ಗೌರವಿಸುವ ಕೆಲಸ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ಹೇಳಿದರು.
ಸುವರ್ಣಾವಕಾಶ ಸಿಕ್ಕಿದೆ: ಇದು ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಸ್ಪರ್ಧೆ ಮಾಡಲು ನನಗೆ ಸಿಕ್ಕ ಸುವರ್ಣಾವಕಾಶವಾಗಿದೆ. ಮೋದಿ ಅವರ ವಿಕಸಿತ ಭಾರತ ಮತ್ತು 10 ವರ್ಷದ ಆಡಳಿತ ನೋಡಿದರೆ ಸರ್ವೋದಯದ ಸಿದ್ಧಾಂತದ ಆಶಯ, ಭ್ರಷ್ಟಾಚಾರ ಮುಕ್ತ ಆಡಳಿತ ಸ್ಪಷ್ಟವಾಗಿದೆ. ದೇಶದ ಶ್ರೇಷ್ಠ ಹಿಂದುಳಿದ ನಾಯಕ ನರೇಂದ್ರ ಮೋದಿ ಅವರು ಎಂದೂ ಜಾತಿ ಹೆಸರು ಹೇಳಿ ರಾಜಕಾರಣ ಮಾಡಿಲ್ಲ. ಅವರೇ ನಮಗೆ ಆದರ್ಶ, ಅವರ ನಾಯಕತ್ವದಲ್ಲಿ ದೇಶದ ಅಭಿವೃದ್ಧಿಯಾಗುತ್ತಿದೆ. ಜಗತ್ತಿನ ಹಲವು ದೇಶಗಳ ಜೊತೆ ಗೌರವಯುತ ವ್ಯವಹಾರ ನಡೆಯುವಂತಾಗಿದೆ. ಸಾಕಷ್ಟು ದೇಶಗಳು ರತ್ನಗಂಬಳಿ ಹಾಸಿ ನಮ್ಮ ದೇಶವನ್ನು ಆಹ್ವಾನ ಮಾಡುತ್ತಿದ್ದಾರೆ ಎಂದು ಮೋದಿ ಅವರನ್ನು ಕಾರಜೋಳ ಹಾಡಿ ಹೊಗಳಿದರು.
ರಾಜ್ಯ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತ ಯೋಚನೆ ಮಾಡಲಿದ್ದೇವೆ. ಹೆಚ್.ಡಿ ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸ ಇದೆ. ಮೈತ್ರಿಕೂಟದಡಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. 400+ ಸ್ಥಾನ ಗೆದ್ದು ಮೋದಿ ಮೂರನೇ ಬಾರಿ ಪ್ರಧಾನಿ ಆಗಲಿದ್ದಾರೆ. ಅದಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಗೋವಿಂದ ಕಾರಜೋಳ ಕರೆ ನೀಡಿದರು.
ಇದನ್ನೂ ಓದಿ : ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಎಂಟ್ರಿ: ರಾಜಕೀಯ ಲೆಕ್ಕಾಚಾರವೇನು? - HDK NATIONAL POLITICS