ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನರೇಂದ್ರ ಮೋದಿ ಗ್ಯಾರಂಟಿ ವಿರುದ್ಧ ಕಾಂಗ್ರೆಸ್ ಗ್ಯಾರಂಟಿಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಲು ನಿರ್ಧರಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯದ ಜನರಿಗೆ ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಲು ಸಲಹೆ ಸೂಚನೆಗಳನ್ನು ನೀಡಲಾಯಿತು.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಜೊತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮನೆ ಮನೆಗೆ ಹೋಗಬೇಕು. ತಂಡ ಮಾಡಿ ಹೋಗಬೇಕು. ವೋಟರ್ ಲಿಸ್ಟ್ ತೆಗೆದುಕೊಂಡು ಮನೆ ಮನೆಗೆ ತೆರಳಬೇಕು. ಮೋದಿ ಗ್ಯಾರಂಟಿ ವಿರುದ್ಧ ನಮ್ಮದು ಕಾಂಗ್ರೆಸ್ ಗ್ಯಾರಂಟಿ ಎಂದು ತಿಳಿಸಿದರು.
ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿ ಇದ್ದರೆ ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಒಳ್ಳೆಯದು. ಐದು ಗ್ಯಾರಂಟಿ ಶಕ್ತಿಯಿಂದ ಜನ ತೆನೆ ಎತ್ತಿ ಬಿಸಾಕಿದ್ದಾರೆ. ಸ್ವಾಭಿಮಾನ ಬಿಡಬೇಕು. ನಾವು ಮೊದಲು ಕಾರ್ಯಕರ್ತರಾಗಿದ್ದೇವೆ. ಪಂಚಾಯತ್ನಲ್ಲಿ ಲೀಡ್ ಕೊಡಿಸುವ ಕೆಲಸ ಮಾಡಬೇಕು. ಐಡಿ ಕಾರ್ಡ್, ಫೋಟೋ ಅಪ್ಲೋಡ್ ಮಾಡಿ ಐಡಿ ಹಾಕಿ ಮನೆ ಮನೆಗೆ ಹೋಗಿ ಗ್ಯಾರಂಟಿ ಬಗ್ಗೆ ಮನವರಿಕೆ ಮಾಡಿ. ನರೇಂದ್ರ ಮೋದಿ ಗಾಳಿನೂ ಇಲ್ಲ. ರಾಮಂದಿರ ಗಾಳಿನೂ ಇಲ್ಲ. ಅದು ನಮ್ಮ ಸಮೀಕ್ಷೆಯಲ್ಲಿ ಗೊತ್ತಾಗಿದೆ. ರಾಜ್ಯದಲ್ಲಿ 20 ಸೀಟುಗಳನ್ನು ನಾವು ಗೆಲ್ಲಬೇಕು ಎಂದು ಕರೆ ನೀಡಿದರು.
ಬೂತ್ ಮಟ್ಟದಲ್ಲಿ 15 ವಾಟ್ಸ್ಆ್ಯಪ್ ಗ್ರೂಪ್ : ಗ್ಯಾರಂಟಿ ಯೋಜನೆಗಳ ಬಗ್ಗೆ ಈಗಾಗಲೇ ಪರ ಹಾಗೂ ವಿರೋಧ ಅಭಿಪ್ರಾಯಗಳು ಇವೆ. ಅದರಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಗ್ಯಾರಂಟಿ ವಿರುದ್ಧ ಅಭಿಪ್ರಾಯ ರೂಪಿಸುತ್ತಿದೆ. ಇದನ್ನು ಹೇಗೆ ಬದಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸಮಿತಿ ಸದಸ್ಯರಿಗೆ ತರಬೇತಿ ನೀಡಲಾಯಿತು. ಬೂತ್ ಮಟ್ಟದಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಅರಿವು ಮೂಡಿಸಬೇಕು. ಅಲ್ಲಿ ಬಿಜೆಪಿ ಗ್ಯಾರಂಟಿ ವಿರುದ್ಧದ ಅಪಪ್ರಚಾರಕ್ಕೆ ಉತ್ತರ ನೀಡಿ, ಅರಿವು ಮೂಡಿಸುವ ಕೆಲಸ ಮಾಡಬೇಕು ಎನ್ನುವುದು ಸಭೆಯಲ್ಲಿ ಸೂಚಿಸಲಾಯಿತು.
ಕಾಂಗ್ರೆಸ್ ಗ್ಯಾರಂಟಿ ಯನ್ನು ಬಿಟ್ಟಿ ಭಾಗ್ಯ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಗ್ಯಾರಂಟಿ ಜನರ ಹಕ್ಕು, ಅದನ್ನು ಬಿಟ್ಟಿ ಭಾಗ್ಯ ಎಂದು ಕರೆಯುವುದು ಅವಮಾನ. ಬದಲಾಗಿ ಬಡವರ ಕೈಗೆ ಹಣ ಹೋದರೆ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಶೇ 57 ರಷ್ಟು ಜನ ಗ್ಯಾರಂಟಿಗೆ ವೋಟ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ಮಹಿಳೆಯರ ಪ್ರಮಾಣ ಜಾಸ್ತಿ ಇದೆ. ಈ ನಿಟ್ಟಿನಲ್ಲಿ ಕ್ಷೇತ್ರವಾರು ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಇದನ್ನೂ ಓದಿ : ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಹೆಸರಿಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ - Lok Sabha Election