ಬೆಂಗಳೂರು: ಇಷ್ಟು ದಿನ ಆಯಾ ತಾಲೂಕು ವ್ಯಾಪ್ತಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗಳಲ್ಲೇ ದಸ್ತಾವೇಜುಗಳ ನೋಂದಣಿ ಮಾಡುವ ಪ್ರಕ್ರಿಯೆ ನಡೆಯುತಿತ್ತು. ಆದರೆ, ಈಗ ನೋಂದಣಿ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಸರ್ಕಾರ 'ಎನಿವೇರ್ ನೋಂದಣಿ ಯೋಜನೆ ' ಜಾರಿಗೆ ತಂದಿದೆ.
ಇನ್ನು ಮುಂದೆ ಜಿಲ್ಲೆಯ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆ ಜಿಲ್ಲೆ ವ್ಯಾಪ್ತಿಯ ಯಾವುದೇ ಸ್ಥಿರಾಸ್ತಿಗಳ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಈಗಾಗಲೇ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಎನಿವೇರ್ ನೋಂದಣಿ ಯೋಜನೆ ಅನುಷ್ಠಾನಗೊಂಡಿದ್ದು, ಅದು ಯಶಸ್ವಿಯಾಗಿದೆ. ಹಾಗಾಗಿ, ಸೆ.2 ರಿಂದ ಎಲ್ಲಾ ಜಿಲ್ಲೆಗಳಲ್ಲೂ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ರಾಜ್ಯದಲಿ 252 ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಗಳಿದೆ. ಆದರೆ, ಈ ಪೈಕಿ 50 ಕಚೇರಿಗಳಲ್ಲಿ ಮಾತ್ರ ಸಿಬ್ಬಂದಿಗಳಿಗೆ ಹೆಚ್ಚು ಕೆಲಸದ ಒತ್ತಡ ಇದೆ. ಹಾಗಾಗಿ, ಆ ಕಚೇರಿಗಳಿಗೆ ಬರುವ ಜನರಿಗೆ ಅನಾನುಕೂಲವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕೆಲಸ ಆಗಲ್ಲ, ಗಂಟೆಗಟ್ಟಲೆ ಕಾಯಬೇಕು. ಇದರ ಜೊತೆಗೆ ಮಧ್ಯವರ್ತಿಗಳ ಕಾಟ ಇದೆ ಎಂಬ ದೂರುಗಳು ಬಂದ ಕಾರಣದಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೆ ಬಂದಿದೆ.
ಎನಿವೇರ್ ರಿಜಿಸ್ಟ್ರೇಷನ್ ಸೇವೆ ಈಗ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿದೆ. ನಿಮ್ಮ ಜಿಲ್ಲೆಯ ಸಮೀಪವಿರುವ ಯಾವುದೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ನಿಮ್ಮ ದಾಖಲೆಯನ್ನು ನೋಂದಾಯಿಸಿ. #AnywhereRegistration@CMofKarnataka@siddaramaiah pic.twitter.com/d6FZGpP2dk
— DIPR Karnataka (@KarnatakaVarthe) September 2, 2024
ಆಸ್ತಿ ನೋಂದಣಿಗೆ ಮುಂದಾಗುವ ವ್ಯಕ್ತಿ ತನ್ನ ಜಿಲ್ಲೆ ವ್ಯಾಪ್ತಿಯ, ತನಗೆ ಅನುಕೂಲವಾಗುವ ಹಾಗೂ ಜನ ಸಂದಣಿ ಇಲ್ಲದ ಯಾವುದೇ ಉಪ ನೋಂದಣಿ ಕಚೇರಿಗೆ ತೆರಳಿ ಆನ್‌ಲೈನ್ ಮೂಲಕ ಸಮಯ ಕಾಯ್ದಿರಿಸಿ ತನ್ನ ಆಸ್ತಿ ನೋಂದಣಿ ಮಾಡಿಕೊಳ್ಳಲು “ಎನಿವೇರ್ ಯೋಜನೆ" ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಎನಿವೇರ್ ನೋಂದಣಿಯನ್ನು ಇದೀಗ ಎಲ್ಲಾ ಜಿಲ್ಲೆಯಲ್ಲೂ ವಿಸ್ತರಿಸಲಾಗಿದೆ. ಇದರಿಂದ ಕಚೇರಿಯಲ್ಲಿ ಜನಜಂಗುಳಿ, ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡಿ ಸುಲಲಿತವಾಗಿ ಜನರಿಗೆ ನೋಂದಣಿ ಕೆಲಸ ಆಗಲು ಈ ಯೋಜನೆ ಸಹಕಾರಿಯಾಗಲಿದೆ.
ತಂತ್ರಜ್ಞಾನ ಬಳಸಿ ಜನಸ್ನೇಹಿ ಆಡಳಿತ : ಕಂದಾಯ ಇಲಾಖೆಯಲ್ಲಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಆಸ್ತಿ ನೋಂದಣಿ ಅವಧಿಯನ್ನು ಕಡಿತಗೊಳಿಸಿ ಜನರ ಕೆಲಸಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕಾವೇರಿ-2 ತಂತ್ರಜ್ಞಾನವನ್ನು ಜಾರಿಗೆ ತರಲಾಗಿತ್ತು. ಇದೀಗ ಮತ್ತೊಮ್ಮೆ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಆರ್‌ಟಿಸಿಗೆ “ಆಧಾರ್ ಜೋಡಣೆ” ಹಾಗೂ “ಎನಿವೇರ್ ನೋಂದಣಿ” ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಇನ್ನು ಮುಂದೆ ಜಿಲ್ಲೆಯ ಯಾವುದೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆ ಜಿಲ್ಲೆ ವ್ಯಾಪ್ತಿಯ ಯಾವುದೇ ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆ ಮಾಡಬಹುದು. ಜೊತೆಗೆ ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ವೈಯಕ್ತಿಕ ಗುರುತಾಗಿ ಆಧಾರ್ ಅಥವಾ ಪಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ನೀಡುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆ ರಾಜ್ಯಾದ್ಯಂತ ಸೆ. 2ರಿಂದ ಜಾರಿಗೆ ಬಂದಿದೆ.
ಆರ್‌ಟಿಸಿಗೆ ಆಧಾರ್ ಜೋಡಣೆ : ಅಕ್ರಮಗಳನ್ನು ತಪ್ಪಿಸುವ ಸಲುವಾಗಿಯೇ ಒಂದೆಡೆ ಆರ್‌ಟಿಸಿ (ಪಹಣಿ)ಗೆ ವಾರಸುದಾರರ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ಯಾವುದೇ ಸ್ಥಿರಾಸ್ತಿಗಳ ನೋಂದಣಿ ಸಂದರ್ಭ ಸಾರ್ವಜನಿಕರು ತಮ್ಮ ವೈಯಕ್ತಿಕ ಗುರುತಾಗಿ ಆಧಾರ್ ಕಾರ್ಡ್/ಪಾನ್‌ಕಾರ್ಡ್ ಅಥವಾ ಪಾಸ್‌ಪೋರ್ಟ್ ಸಲ್ಲಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. 3 ತಾಲೂಕುಗಳಲ್ಲಿ ಪ್ರಯೋಗ ಯಶಸ್ವಿಯಾದ ನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ.
ಜಮೀನಿನ ಮಾಲೀಕತ್ವದ ಸುರಕ್ಷೆ, ಭದ್ರತೆ ದೃಷ್ಟಿಯಿಂದ ಹಾಗೂ ವಂಚನೆ ತಪ್ಪಿಸುವ ಉದ್ದೇಶದಿಂದ ಆಧಾರ್ ವಿಲೀನಕ್ಕೆ ಜನರು ಒಪ್ಪಿ ಸಹಕರಿಸಬೇಕು. ಇದು ವ್ಯವಸ್ಥೆ ಮೇಲೆ ನಂಬಿಕೆ ತರುವ ಪ್ರಯತ್ನ. ಇದನ್ನು ಅನಾನುಕೂಲ ಎಂದು ಭಾವಿಸದೆ. ಸಕಾರಾತ್ಮಕವಾಗಿ ಸ್ಪಂದಿಸಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರಿಗೋ ಸೇರಿದ ಜಮೀನನ್ನು ಮತ್ಯಾರಿಗೋ ಪರಭಾರೆ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇದನ್ನು ಸರಿಪಡಿಸುವ ಸಲುವಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಇತ್ತೀಚಿಗೆ ತಿಳಿಸಿದ್ದರು.