ಬೆಂಗಳೂರು: ''ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಿಂತಿದ್ದೇವೆ. ಅವರಿಗೆ ಬೆಂಬಲ ಕೊಟ್ಟಿದ್ದೇವೆ. ಯಾಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ, ವೈಯಕ್ತಿಕ ಅಲ್ಲ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ''ಎಫ್ಐಆರ್ ದಾಖಲಾದ ಮೇಲೆ ಹೈಕಮಾಂಡ್ ಸಿಎಂ ಜೊತೆ ನಿಲ್ಲುತ್ತಾ ಅನ್ನೋದು ಹೈ ಪೊಲಿಟಿಕಲ್ ಪ್ರಶ್ನೆ. ನಾವು ಅವರ ಜೊತೆ ನಿಂತಿದ್ದು, ಬೆಂಬಲ ಕೊಟ್ಟಿದ್ದೇವೆ. ಮೋದಿ ದಲಿತ ನಾಯಕ ಹಾಗೂ ದಲಿತರ ಫಂಡ್ ಬಗ್ಗೆ ಹರಿಯಾಣದಲ್ಲಿ ಮಾತನಾಡಿರುವುದಕ್ಕೆ ನಾನು ಹರಿಯಾಣದಲ್ಲೇ ಉತ್ತರ ಕೊಡುತ್ತೇನೆ'' ಎಂದರು.
''ಎಫ್ಐಆರ್ ಆದರೆ ಸಿಎಂ ರಾಜೀನಾಮೆ ಕೊಡಬೇಕು ಅನ್ನೋದಾದರೆ, ಗೋದ್ರಾ ಪ್ರಕರಣ ಆದಾಗ ಮೋದಿಯವರು ರಾಜೀನಾಮೆ ನೀಡಿದ್ದರಾ? ಅಮಿತ್ ಶಾ ಅವರದು ಸಾಕಷ್ಟು ಪ್ರಕರಣ ಆಗಿತ್ತು. ಯಾರನ್ನೇ ಆಗಲಿ ವೈಯುಕ್ತಿಕವಾಗಿ ಟಾರ್ಗೆಟ್ ಮಾಡಬಾರದು. ಅವರಿಗೆ ಇಮೇಜ್ ಡ್ಯಾಮೇಜ್ ಮಾಡಲಿಕ್ಕೆ, ಅದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ಅವರ ಆಸಕ್ತಿ ಇರೋದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವುದು, ವೈಯಕ್ತಿಕ ಅಲ್ಲ'' ಎಂದು ಹೇಳಿದರು.
ಇವತ್ತು ಇರಬಹುದು ನಾಳೆ ಇಲ್ಲದೇ ಇರಬಹುದು: ''ಇವತ್ತು ಅವರು ಇರಬಹುದು, ನಾಳೆ ಇಲ್ಲದೇ ಇರಬಹುದು. ಆದರೆ ಪಕ್ಷ ಮುಂದುವರೆಯುತ್ತದೆ'' ಎಂದು ಇದೇ ವೇಳೆ ಸೂಚ್ಯವಾಗಿ ಹೇಳಿಕೆ ನೀಡಿದರು.
''ಕಾಂಗ್ರೆಸ್ ಪಕ್ಷದ ಮೂಲ ಮತಗಳನ್ನು ಹಾಳು ಮಾಡಲಿಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ. ಕಾನೂನು ಅದರದೇ ಆದ ಕ್ರಮಗಳನ್ನು ಕೈಗೊಳ್ಳುತ್ತದೆ. ಪರಿಸ್ಥಿತಿ ಏನು ಬರುತ್ತದೆ ಅನ್ನೋದನ್ನು ಪರಿಶೀಲಿಸುತ್ತದೆ. ಏನೂ ಇಲ್ಲದಿದ್ದರೂ ಪ್ರತಿದಿನ ಮುಡಾ ಮುಡಾ ಅಂತಿದಾರೆ. 16 ಲಕ್ಷ ಕೋಟಿ ಉದ್ಯಮಿಗಳು ಹಣ ಲೂಟಿ ಮಾಡಿದರು. ಈಗ ಸಣ್ಣ ವಿಚಾರ ತಗೆದುಕೊಂಡು ಫೈಟ್ ಮಾಡುತ್ತಿದ್ದಾರೆ. ಅದರಲ್ಲೂ ಚಾರ್ಜ್ಶೀಟ್ ಸಹ ಆಗಿಲ್ಲ. ಕನ್ವಿಕ್ಷನ್ ಆಗಿಲ್ಲ. ಪ್ರತಿದಿನ ಇದನ್ನೇ ಮಾತನಾಡುತ್ತಿದ್ದಾರೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ: ರಾಜಭವನದಿಂದ ಮಾಹಿತಿ ಸೋರಿಕೆ ಆರೋಪ: ರಾಜ್ಯಪಾಲರು ಅನುಮತಿ ನೀಡಿದರೆ ತನಿಖೆಗೆ ನಾವು ರೆಡಿ- ಜಿ.ಪರಮೇಶ್ವರ್ - G Parameshwar
''ಸಿಬಿಐಗೆ ಮುಕ್ತ ತನಿಖೆ ಅವಕಾಶ ವಾಪಸ್ ಪಡೆದಿರುವುದು ಇದೇ ಮೊದಲಲ್ಲ. ದೇವರಾಜ ಅರಸು ಕಾಲದಲ್ಲೂ ಹೀಗೆಯೇ ಮಾಡಲಾಗಿತ್ತು. ನಾನೇ ಗೃಹ ಸಚಿವನಾಗಿದ್ದಾಗ ವೀರಪ್ಪನ್ ಪ್ರಕರಣ, ತೆಲಗಿ ಪ್ರಕರಣ ಹಾಗೂ ಕೋಲಾರದ ಒಂದು ಪ್ರಕರಣ ಮೂರು ತನಿಖೆಗೆ ಶಿಫಾರಸು ಮಾಡಿದರು. ಅವರು ತನಿಖೆ ಮಾಡಲಿಲ್ಲ. ವೀರಪ್ಪನ್ ನೂರಾರು ಜನರನ್ನು ಕೊಂದ, ತೆಲಗಿ ಸಾವಿರಾರು ಕೋಟಿ ಸರ್ಕಾರದ ಹಣ ಬಳಸಿಕೊಂಡ. ಅದನ್ನು ಸಿಬಿಐ ತನಿಖೆ ಮಾಡಲಿಲ್ಲ. ರಾಜಭವನ ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಬಗ್ಗೆ ನಾನು ಮಾತನಾಡಲ್ಲ'' ಎಂದರು.
ಇದನ್ನೂ ಓದಿ: 'ಸಿಬಿಐ ತನಿಖೆಗೆ ಮುಕ್ತ ಅನುಮತಿ ಹಿಂಪಡೆದಿರುವುದು ಸಿದ್ದರಾಮಯ್ಯನವರ ರಕ್ಷಣೆಗಾಗಿ ಅಲ್ಲ' - D K Shivakumar