ದಾವಣಗೆರೆ: ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ ಮೇಲೆ ಈಗಾಗಲೇ ದೂರು ದಾಖಲಾಗಿದೆ. ರಾಜ್ಯದಲ್ಲಿ ಈ ರೀತಿ ಘಟನೆ ನಡೆದಿದೆ ಎಂದು ತಿಳಿದ ತಕ್ಷಣ ಎಸ್ಐಟಿ ರಚಿಸಿ ತನಿಖೆ ನಡೆಸುತ್ತಿದ್ದೇವೆ. ಸತ್ಯಾಸತ್ಯತೆ ಹೊರ ಬರುವವರೆಗೂ ಹೀಗಂತೆ, ಹಾಗಂತೆ ಎಂದು ಮಾತನಾಡುವುದು ಸರಿಯಲ್ಲ. ತನಿಖಾ ವರದಿಯನ್ನು ಶೀಘ್ರವಾಗಿ ಕೊಡಬೇಕು ಎಂದು ಸರ್ಕಾರ ಈಗಾಗಲೇ ಸೂಚನೆ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ವಿದೇಶಕ್ಕೆ ಹೋಗಿದ್ದಾರೆ ಎಂದು ನಾವು ಅವರ ಫ್ಲೈಟ್ ಟಿಕೆಟ್ ಸೀಜ್ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಾರಂ 41ನಲ್ಲಿ ನೋಟಿಸ್ ನೀಡಲಾಗಿದೆ. 24 ಗಂಟೆಯೊಳಗೆ ತನಿಖೆಗೆ ಹಾಜರಾಗಬೇಕು. ಇಲ್ಲವಾದರೆ ಅವರನ್ನು ಬಂಧಿಸಬೇಕೋ, ಇಲ್ಲವೇ ಬೇರೆ ಕ್ರಮ ಕೈಗೊಳ್ಳಬೇಕೋ ಎನ್ನುವುದು ಎಸ್ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟದ್ದು. ಪ್ರಕರಣದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಎಂದರು.
ಇದೇ ವೇಳೆ ಪ್ರಕರಣದ ಕುರಿತು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಮಾಹಿತಿ ಕೊರತೆ ಇದೆ ಅನ್ನಿಸುತ್ತೆ. ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಕರ್ನಾಟಕದ ಮಹಿಳಾ ಅಯೋಗಕ್ಕೆ ದೂರು ಬಂದ ನಂತರ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ನಾನು ಅಂಕಿಅಂಶಗಳನ್ನು ಸದನದಲ್ಲಿ ಬಹಿರಂಗಪಡಿಸುತ್ತೇನೆ. ಅವರ ಆಡಳಿತಾವಧಿಯಲ್ಲಿ ಎಷ್ಟರಮಟ್ಟಿಗೆ ಕಾನೂನು ಸುವ್ಯವಸ್ಥೆ ಇತ್ತು ಎನ್ನುವುದನ್ನು ತಿಳಿಸುತ್ತೇನೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಯನ್ನು ಕರ್ನಾಟಕ ಪೊಲೀಸರು ನೀಡಿದ ಸುಳಿವಿನಿಂದ ಬಂಧಿಸಿದ್ದಾರೆ. ನೇಹಾ ಹತ್ಯೆ ಮಾಡಿದ ಆರೋಪಿಯನ್ನು ಒಂದು ಗಂಟೆಯೊಳಗೆ ಬಂಧಿಸಿದ್ದೇವೆ. ಕಾನೂನುಬಾಹಿರ ಕೃತ್ಯಗಳು ನಡೆದರೆ ಅದರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಸಾವಿರಾರು ಕೋಟಿ ರೂ ಮೌಲ್ಯದ ಡ್ರಗ್ಸ್ ಅನ್ನು ಕೂಡ ನಾನೇ ಮುಂದು ನಿಂತು ಸುಟ್ಟು ಹಾಕಿಸಿದ್ದೇನೆ. ಬಿಜೆಪಿಯವರು ಇದನ್ನೆಲ್ಲಾ ಅರಿತು ಮಾತನಾಡಲಿ ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಯಾವ ಮೋದಿ ಅಲೆಯೂ ಇಲ್ಲ. ಮೋದಿಯನ್ನು ಬದಲಾವಣೆ ಮಾಡಬೇಕು ಎನ್ನುವ ಗಾಳಿ ಇದೆ. ನನಗಿರುವ ಮಾಹಿತಿ ಪ್ರಕಾರ, ದಾವಣಗೆರೆಯಲ್ಲಿ ಸಹೋದರಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದು, ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಕೇಸ್: ಎಸ್ಐಟಿಯಿಂದ ನಿಷ್ಪಕ್ಷಪಾತ ತನಿಖೆ- ಸಚಿವ ಕೆ.ಎನ್.ರಾಜಣ್ಣ - Hassan Pen Drive Case