ಹುಬ್ಬಳ್ಳಿ: ಸ್ಮಾರ್ಟ್ ಸಿಟಿಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಬೈಸಿಕಲ್ ಶೇರಿಂಗ್ ಕೂಡಾ ಒಂದು. ಸೈಕಲ್ ರೈಡಿಂಗ್ ಉತ್ತೇಜಿಸಲು ಆರಂಭಿಸಿದ ಈ ವ್ಯವಸ್ಥೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಡಾಕಿಂಗ್ ಸ್ಟೇಷನ್ (ಬೈಸಿಕಲ್‌ಗಳನ್ನು ನಿಲ್ಲಿಸುವ ಸ್ಥಳ) ಸ್ಥಳಾಂತರಿಸಲು ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆ ಬೈಲಪ್ಪನವರ ನಗರದ ಡಾಕಿಂಗ್ ಸ್ಟೇಷನ್ ಸ್ಥಳಾಂತರಿಸಲಾಗಿದ್ದು, ಅದನ್ನು ಸಿದ್ದಾರೂಢ ಮಠದ ಬಳಿ ಸ್ಥಾಪಿಸಲು ಯೋಜಿಸಲಾಗಿದೆ. ಬೈಲಪ್ಪನವರ ನಗರದ ಡಾಕಿಂಗ್ ಸ್ಟೇಷನ್‌ನಿಂದ ಸಾರ್ವಜನಿಕರು ಬೈಸಿಕಲ್‌ಗಳನ್ನು ಬಳಸುವ ಪ್ರಮಾಣ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೈಸಿಕಲ್‌ಗಳ ಜೊತೆ ಡಾಕಿಂಗ್ ಸ್ಟೇಷನ್ ಎತ್ತಂಗಡಿಯಾಗುತ್ತಿದೆ.
2022ರ ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ಮೊದಲ ಬಾರಿ ಆರಂಭಗೊಂಡ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆಯಡಿ ಸ್ಥಳಾಂತರಗೊಂಡ ಮೊದಲ ಡಾಕಿಂಗ್ ಸ್ಟೇಷನ್ ಇದಾಗಿದೆ. ಸಿದ್ಧಾರೂಢ ಮಠ, ಹಳೇ ಬಸ್ ನಿಲ್ದಾಣ ಬಳಿ ಡಾಕಿಂಗ್ ಸ್ಟೇಷನ್ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಹತ್ತಿರವಾದ ಸೂಕ್ತ ಸ್ಥಳ ಲಭ್ಯವಿರುವೆಡೆ ಮಾತ್ರ ಡಾಕಿಂಗ್ ಸ್ಟೇಷನ್ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂಬುದು ಹು-ಧಾ ಸ್ಮಾರ್ಟ್ ಸಿಟಿ ಕಂಪನಿಯ ಇರಾದೆ.
ಈ ಕುರಿತಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತ್‌ಗೆ ಪ್ರತಿಕ್ರಿಯೆ ನೀಡಿದ್ದು, ಹುಬ್ಬಳ್ಳಿಯಲ್ಲಿ ಒಟ್ಟು 35 ಡಾಕ್ ಸ್ಟೇಷನ್ ಇವೆ. ಒಂದು ಡಾಕ್ ಸ್ಟೇಷನ್‌ನಲ್ಲಿ 10 ಸೈಕಲ್ ಇರುತ್ತವೆ. ಅದರಲ್ಲಿ 9 ಮ್ಯಾನುವಲ್ ಇದ್ದು, ಒಂದು ಎಲೆಕ್ಟ್ರಿಕ್ ಇದೆ. ಸಾರ್ವಜನಿಕರಿಗೆ ಒಂದು ತಾಸಿಗೆ 5 ರೂ. ಚಾರ್ಜ್ ಮಾಡಲಾಗುತ್ತಿದೆ. ಇತ್ತೀಚಿಗೆ ಕೆಲ ಸಂಘ ಸಂಸ್ಥೆಗಳು, ರಾಜಕೀಯ ನಾಯಕರಿಂದ ಬೇರೆ ಬೇರೆ ಕಡೆ ಡಾಕ್ ಸ್ಟೇಷನ್ ಮಾಡಬೇಕು ಎಂಬ ಬೇಡಿಕೆ ಬಂದಿದೆ. ಪ್ರತೀ ತಿಂಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದ್ದು, ಯಾವ ಡಾಕ್ ಸ್ಟೇಷನ್ ಬೇಡಿಕೆ ಕಡಿಮೆ ಇದೆ ಎಂಬುದನ್ನು ಅರಿತು ಬೇಡಿಕೆ ಹೆಚ್ಚು ಇರುವ ಕಡೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದರು.
"ಸದ್ಯ ಸಿದ್ದಾರೂಢ ಮಠ, ಸಿಬಿಟಿಗೆ ಹೊಸದಾಗಿ ಡಾಕ್ ಸ್ಟೇಷನ್ ಬೇಕು ಎಂಬ ಬೇಡಿಕೆ ಬಂದಿದೆ. ಹೀಗಾಗಿ ಸ್ಥಳಾಂತರ ಮಾಡಲು ಮಹಾನಗರ ಪಾಲಿಕೆ ಜೊತೆ ಮಾತುಕತೆ ನಡೆದಿದೆ. ನಗರದಲ್ಲಿ ಬೈಸಿಕಲ್ ಶೇರಿಂಗ್ ಬಳಕೆ ಅಷ್ಟೊಂದು ಉತ್ತಮವಾಗಿಲ್ಲ. ನಗರದಲ್ಲಿ ಸಾಕಷ್ಟು ರಸ್ತೆ ಅಭಿವೃದ್ದಿ ಕಾರ್ಯಗಳು, ಪ್ಲೈಓವರ್ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಬೈಸಿಕಲ್ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಬಳಕೆ ಇಲ್ಲದ ಮೂರು ಡಾಕ್ ಸ್ಟೇಷನ್ಗಳನ್ನು ಪ್ರಮುಖವಾಗಿ ಸಿದ್ದಾರೂಢ ಮಠ, ಸಿಬಿಟಿ ಹಾಗೂ ಚೆನ್ನಮ್ಮ ವೃತ್ತದ ಬಳಿಯ ಹಳೇ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುವುದು" ಎಂದು ಮಾಹಿತಿ ನೀಡಿದರು.
ಬೈಸಿಕಲ್ ಬಳಕೆ ಕಡಿಮೆ: ಹುಬ್ಬಳ್ಳಿಯ 35 ಸ್ಥಳಗಳಲ್ಲಿ ಡಾಕಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಒಂದು ಈಗ ಅಸ್ತಿತ್ವದಲ್ಲಿಲ್ಲ. ಪ್ರತr ಸ್ಟೇಷನ್‌ನಲ್ಲಿ 10 ರಂತೆ ಒಟ್ಟಾರೆ 340 ಬೈಸಿಕಲ್‌ಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗುತ್ತವೆ. ಹಾಗೆ ನೋಡಿದರೆ, ಒಟ್ಟಾರೆ ಬೈಸಿಕಲ್ ಬಳಕೆ ಪ್ರಮಾಣ ಸಮಾಧಾನಕರವಾಗಿಲ್ಲ. ಒಟ್ಟು ಲಭ್ಯವಿರುವ 340 ಬೈಸಿಕಲ್‌ಗಳಲ್ಲಿ ನಿತ್ಯ ಸರಾಸರಿ 60 ರಿಂದ 90 ಬೈಸಿಕಲ್‌ಗಳು ಬಳಕೆಯಾಗುತ್ತಿವೆ. ಬಳಕೆ ಪ್ರಮಾಣ ಶೇ. 20 ರಿಂದ 30 ರಷ್ಟಿದೆ. ಇದರರ್ಥ ಸ್ಮಾರ್ಟ್ ಸಿಟಿಯ ಇನ್ನೊಂದು ಯೋಜನೆ ಜನ ವಿಶ್ವಾಸ ಕಳೆದುಕೊಂಡಂತಾಗಿದೆ.
ಬೆಳಗ್ಗೆ 6.30ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 7 ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ಹೆಚ್ಚು ಬಳಕೆಯಾಗುತ್ತಿವೆ. ಅದು ಸಹ ಕಾಲೇಜು, ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ವಸಾಹತು ಸ್ಥಳಗಳಲ್ಲಿ ಮಾತ್ರ. ಉಳಿದ ಅವಧಿ ಹಾಗೂ ಸ್ಥಳಗಳಲ್ಲಿ ಬಳಕೆ ಪ್ರಮಾಣ ತೀರ ಕಳಪೆಯಾಗಿದೆ.
8.5 ಕೋಟಿ ರೂ. ವೆಚ್ಚ: ಐದು ವರ್ಷಗಳ ನಿರ್ವಹಣೆಯೂ ಸೇರಿದಂತೆ 8.5 ಕೋಟಿ ರೂ. ವೆಚ್ಚದಲ್ಲಿ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಟ್ರಿನಿಟಿ ಟೆಕ್ನಾಲಜೀಸ್ ಆ್ಯಂಡ್ ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಇದರ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆ ಹೊತ್ತಿದೆ. ಸ್ಥಳಾಂತರ ಅಗತ್ಯ ಎದುರಾದಲ್ಲಿ ಇವರೇ ತಮ್ಮ ಖರ್ಚಿನಲ್ಲಿಯೇ ಮಾಡುತ್ತಾರೆ.
ಸೈಕಲ್ ಬಳಕೆ ಹೇಗೆ?: ಈ ಯೋಜನೆಯಡಿ ಬೈಸಿಕಲ್ ಬಳಕೆದಾರರು 300 ರೂ. ಪಾವತಿಸಿ ಸದಸ್ಯತ್ವ ಪಡೆಯಬೇಕಾಗುತ್ತದೆ. ಇದರಲ್ಲಿ ಸಂಸ್ಕರಣೆ ಶುಲ್ಕ ಹಾಗೂ ವಿಮೆ ಎಂದು 200 ರೂ. ಕಡಿತವಾಗಿ ಸದಸ್ಯರ ಖಾತೆಯಲ್ಲಿ 100 ರೂ. ಉಳಿಯುತ್ತದೆ. ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಇದರಿಂದ ಡಾಕಿಂಗ್ ಸ್ಟೇಷನ್‌ನಲ್ಲಿ ಬೈಸಿಕಲ್ ಅನ್‌ಲಾಕ್ ಮಾಡಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಬೈಸಿಕಲ್ ಅನ್ನು ಪುನಃ ಡಾಕಿಂಗ್ ಸ್ಟೇಷನ್‌ಗೆ ತಂದು ಲಾಕ್ ಮಾಡುವವರೆಗೆ ಪ್ರತೀ ಗಂಟೆಗೆ 5 ರೂ. ನಂತೆ ಖಾತೆಯಲ್ಲಿನ ಹಣ ಕಡಿತವಾಗುತ್ತದೆ. ಹಣ ಖಾಲಿ ಆದ ಮೇಲೆ ಕನಿಷ್ಠ 100 ರಿಂದ 2000 ರೂ. ವರೆಗೆ ರಿಚಾರ್ಜ್ ಮಾಡಲು ಅವಕಾಶವಿದೆ. ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ವ್ಯಾಲಿಡಿಟಿ ಇರುತ್ತದೆ.
ಬೈಸಿಕಲ್ ಬಳಕೆಯ ಪ್ರಮಾಣ:
ತಿಂಗಳು | ಬಳಕೆದಾರರು |
ಜನವರಿ | 2817 |
ಫೆಬ್ರವರಿ | 2456 |
ಮಾರ್ಚ್ | 2919 |
ಏಪ್ರಿಲ್ | 2479 |
ಮೇ | 2497 |
ಜೂನ್ | 2029 |
ಜುಲೈ | 2102 |
ಆಗಸ್ಟ್ | 2232 |
ಸೆಪ್ಟೆಂಬರ್ | 1982 |