ಮೈಸೂರು: ನಮ್ಮಲ್ಲಿ ಒಳಜಗಳ ಇಲ್ಲ. ಒಂದು ವೇಳೆ ಒಳಜಗಳ ಇದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ವಿಧಾನ ಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಈ ಬಾರಿ ವಾತಾವರಣ ಉತ್ತಮವಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಅಭ್ಯರ್ಥಿಗಳನ್ನು ಆರು ತಿಂಗಳು ಮುಂಚಿತವಾಗಿಯೇ ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಸಮಯ ಸಿಕ್ಕು, ಮತದಾರರನ್ನು ಭೇಟಿಯಾಗಲು ಅವಕಾಶ ದೊರೆಯಿತು ಎಂದರು.
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬುದಕ್ಕೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ರಾಜಕೀಯವಾಗಿ ಪ್ರಬುದ್ಧರು. ಯಾವುದು ಸರಿ, ಯಾವುದು ತಪ್ಪು ಎನ್ನುವ ಬಗ್ಗೆ ಅರಿವು ಹೊಂದಿದವರು. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ತುಲನೆ ಮಾಡುವ ಶಕ್ತಿ ಅವರಿಗಿದೆ ಎಂದು ಹೇಳಿದರು.
ಬೇರೆ ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಬಗ್ಗೆ ಮಾತನಾಡುತ್ತಾ, ಪ್ರಚಾರಕ್ಕೆ ಆಹ್ವಾನ ಬಂದಿದೆ ಎಂದು ತಿಳಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಪೆನ್ ಡ್ರೈವ್ ಇದ್ದು, ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕಿದೆ ಎಂದರೆ ಬಿಡುಗಡೆ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿಯವರದ್ದು ಹಿಟ್ ಆ್ಯಂಡ್ ರನ್ ಕೇಸ್ ಎಂದು ವ್ಯಂಗ್ಯವಾಡಿದರು.
ಮಹಾರಾಷ್ಟ್ರ ಸಿಎಂ ಶಿಂಧೆ, ಕರ್ನಾಟಕ ಸರ್ಕಾರ ಪತನವಾಗುವ ಬಗ್ಗೆ ಮಾತನಾಡಿರುವುದಕ್ಕೆ, ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬದಲು ಅವರ ಸರ್ಕಾರವನ್ನು ಮೊದಲು ಉಳಿಸಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಬರ ಪರಿಹಾರಕ್ಕೆ ಆಗ್ರಹಿಸಿ ಹಾವೇರಿ ರೈತರಿಂದ ಪತ್ರ ಚಳವಳಿ - Drought Relief