ಬೆಂಗಳೂರು: ನಮ್ಮ ಶಕ್ತಿ ಇರುವ ಕಡೆ ಮಾತ್ರ ಟಿಕೆಟ್ ಕೇಳಿದ್ದೇವೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಶಕ್ತಿಯ ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ಗೆ 2 ರಿಂದ 3 ಲಕ್ಷ ಮತಗಳು ಇವೆ. ಅದನ್ನು ಬಿಜೆಪಿಗೆ ಹಾಕಲು ಸೂಚನೆ ನೀಡಲಾಗಿದೆ ಎಂದರು.
ಇವತ್ತು ಕೋರ್ ಕಮಿಟಿ ಸಭೆ ಇದೆ. ಲೋಕಸಭೆ ಚುನಾವಣೆ ಘೋಷಣೆ ಆಗಿದೆ. ದಿನಾಂಕ ಪ್ರಕಟ ಆಗಿದೆ. ನಮ್ಮ ಪಕ್ಷದಲ್ಲಿ ಈಗಾಗಲೇ ಜಿಲ್ಲಾಧ್ಯಕ್ಷರ ನೇಮಕ ಆಗಿದೆ. 28 ಕ್ಷೇತ್ರಕ್ಕೆ ಉಸ್ತುವಾರಿಗಳ ನೇಮಕ ಮಾಡಿದ್ದೇವೆ. ಪದಾಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆಂದು ತಿಳಿಯಲು ಇವತ್ತು ಸಭೆ ಮಾಡುತ್ತೇವೆ. ನಾವು 3 ರಿಂದ 4 ಕ್ಷೇತ್ರಗಳನ್ನು ಕೇಳಿದ್ದೇವೆ. ನಮ್ಮ ಪಕ್ಷ ಗೆಲ್ಲುವ ಕ್ಷೇತ್ರ ಮಾತ್ರ ಕೇಳ್ತಿದ್ದೇವೆ. ನಮಗೆ ಸಿಗುವ ಟಿಕೆಟ್ ಜಾಗದಲ್ಲಿ ಬಿಜೆಪಿ ಅವರು ನಮಗೆ ಮತ ಹಾಕ್ತಾರೆ. ನಮ್ಮ ಗುರಿ 28ಕ್ಕೆ 28 ಸ್ಥಾನ ಗೆಲ್ಲುವುದು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದರು.
ಜೆಡಿಎಸ್ ಕ್ಷೇತ್ರಗಳ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ನಾಯಕ ಹೆಚ್ ಡಿ ಕುಮಾರಸ್ವಾಮಿ ಬರುತ್ತಾರೆ. ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ನಮಗೆ ಸಿಗುವ ಕ್ಷೇತ್ರಗಳ ಬಗ್ಗೆ ನಮಗೆ ಯಾವುದೇ ಗೊಂದಲ ಇಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ನಾವು ಕೇಳಿಲ್ಲ. ಆದರು ಬಿಜೆಪಿ ಅವರು ತೆಗೆದುಕೊಳ್ಳಿ ಅಂತಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಂತಿಮವಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಹೆಚ್ಡಿಕೆ ಅಥವಾ ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡಬೇಕು: ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಬೇಕೆಂದು ನಾವೆಲ್ಲ ಈಗಾಗಲೇ ಸರ್ವಾನುಮತದಿಂದ ಹೇಳಿದ್ದೇವೆ. ಮಾರ್ಚ್ 25ಕ್ಕೆ ಅಭ್ಯರ್ಥಿ ಘೋಷಣೆ ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅದರಂತೆ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. ಮಂಡ್ಯದಲ್ಲಿ ಯಾರೇ ನಿಂತರು ಗೆಲ್ಲುವ ವಾತಾವರಣ ಇದೆ. ಕುಮಾರಸ್ವಾಮಿ, ನಿಖಿಲ್ ಬಂದರೆ ಅತ್ಯಂತ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ಕುಮಾರಸ್ವಾಮಿ ಅವರ ಋಣ ತೀರಿಸಬೇಕೆನ್ನುವ ಅಭಿಪ್ರಾಯ ನಮ್ಮ ಜಿಲ್ಲೆಯಲ್ಲಿ ಇದೆ. ನಾವು ಇವತ್ತು ಒತ್ತಾಯ ಮಾಡ್ತಿದ್ದೇವೆ. ಕುಮಾರಸ್ವಾಮಿ ಅವರು ನಮ್ಮ ಮಾತಿಗೆ ಬೆಲೆ ಕೊಡಬೇಕು ಎಂದರು.
ನಿಮಗೆ ಸ್ಪರ್ಧೆ ಮಾಡಿ ಅಂತ ಕುಮಾರಸ್ವಾಮಿ ಹೇಳಿದರೆ ಸ್ಪರ್ಧೆಗೆ ಒಪ್ಪಿಕೊಳ್ತೀರಾ ಎಂಬ ಪ್ರಶ್ನೆ ಉತ್ತರಿಸಿ, ಬಹಳ ಜನ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದೇವೆ. ಅಂತಹ ಪರಿಸ್ಥಿತಿ ಬಂದಾಗ ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ. ನಾವು ಪಕ್ಷದ ಕಟ್ಟಾಳು. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಮಾಡಿಕೊಂಡು ಬಂದಿದ್ದೇವೆ. ಬಹಳ ಜನ ನಮ್ಮ ಪಕ್ಷದಲ್ಲಿ ಸಮರ್ಥರಿದ್ದೇವೆ. ಪಕ್ಷ ಏನೇ ತೀರ್ಮಾನ ಮಾಡಿದರೂ ಅದನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ನಾಳೆ ಮಹತ್ವದ ಸುದ್ದಿಗೋಷ್ಟಿ ಕರೆದ ಸದಾನಂದ ಗೌಡ: ಮುಂದಿನ ರಾಜಕೀಯ ನಿರ್ಧಾರ ಪ್ರಕಟ?