ಮೈಸೂರು: "ಇಡಿಗೆ ಮುಡಾ ಹಗರಣ ಕುರಿತು ವಿಚಾರಣೆ ನಡೆಸುವ ಹಕ್ಕಿಲ್ಲ. ಸುಳ್ಳು ಆರೋಪ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕಪ್ಪುಮಸಿ ಬಳಿದು, ಅವರ ರಾಜೀನಾಮೆ ಪಡೆದು, ಬಿಜೆಪಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಅದಕ್ಕೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಮಗೆ ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ 5 ರಂದು ಹಾಸನದಲ್ಲಿ ನಡೆಯಲಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶದ ಹಿನ್ನೆಲೆ ಮೈಸೂರಿನ ವಿಶ್ವ ವಿದ್ಯಾಲಯದ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಜನಾಂದೋಲನ ಸಮಾವೇಶದ ಪ್ರಚಾರ ರಥಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾಧ್ಯಮಾಗಳ ಜತೆ ಮಾತನಾಡಿದ ಅವರು, "ಮುಡಾ ವಿಚಾರದಲ್ಲಿ ನಮ್ಮ ತಂದೆ ಮೇಲಿನ ಆರೋಪದ ಬಗ್ಗೆ ಇಡಿಗೆ ವಿಚಾರಣೆ ಮಾಡುವ ಹಕ್ಕಿಲ್ಲ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಅವರಿಗೂ ಗೊತ್ತಿದೆ. RTI ಕಾರ್ಯಕರ್ತರು ಮಾಡಿರುವ ಆರೋಪದಲ್ಲಿ ಸತ್ಯಾಂಶ ಇಲ್ಲ. ಪ್ರತಿಪಕ್ಷಗಳು ನಮ್ಮನ್ನು ಡೆಮಾಲಿಷ್ ಮಾಡಲು ಯತ್ನಿಸುತ್ತಿದೆ. ಅಧಿಕಾರಕ್ಕಾಗಿ ಏನು ಬೇಕಾದೂ ಮಾಡಲು ಪ್ರತಿಪಕ್ಷಗಳು ಸಿದ್ಧವಿದೆ
ಉಪಚುನಾವಣಾ ಫಲಿತಾಂಶ ವಿಶ್ವಾಸ ಹೆಚ್ಚಿಸಿದೆ: ಮೂರು ಉಪಚುನಾವಣಾ ಫಲಿತಾಂಶ ನಮಗೆ, ನೈತಿಕ ಬೆಂಬಲ, ವಿಶ್ವಾಸ ಹೆಚ್ಚಿಸಿದೆ. ಜನರ ಬೆಂಬಲ ನಮ್ಮ ಪರವಾಗಿದೆ. ಹೀಗಾಗಿ ನಾವು ರಾಜೀನಾಮೆ ಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ" ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
"ಸಿಎಂ ಪತ್ನಿಗೆ ದಾನವಾಗಿ ಬಂದ ಜಮೀನಿನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇದರಲ್ಲಿ ನಮ್ಮ ತಪ್ಪಿಲ್ಲ. ಜಮೀನು ಮಾರಿದ ದೇವರಾಜು ತಪ್ಪು ಮಾಡಿದ್ರೆ, ಅದು ಅವರ ತಪ್ಪು. ನಮ್ಮ ತಪ್ಪಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು ಎಲ್ಲವೂ ಅಲ್ಲೇ ನಿರ್ಧಾರವಾಗುತ್ತದೆ. ನಮ್ಮ ತಂದೆ ತಾಯಿ ಹಾಗೂ ಮಾವನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ಇದು ತನಿಖಾ ಸಂಸ್ಥೆಗಳಿಗೂ ಗೊತ್ತಿದೆ. ಇಡಿಯಿಂದ ಮುಡಾ ಕ್ಲೀನ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮುಡಾವನ್ನು ಕ್ಲೀನ್ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಖಂಡಿತವಾಗಿಯೂ ಮುಡಾವನ್ನು ನಾವೇ ಕ್ಲೀನ್ ಮಾಡುತ್ತೇವೆ" ಎಂದು ಹೇಳಿದರು.
ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ: ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಸಮಾವೇಶ ಮಾಡಲಾಗುತ್ತಿದೆ. ಈ ಸಮಾವೇಶದ ಮೂಲಕ ವಿಪಕ್ಷಗಳ ಆರೋಪಕ್ಕೆ ಉತ್ತರ ನೀಡಲಿದ್ದೇವೆ. ಹಾಸನದಲ್ಲಿ ಡಿ.5 ರಂದು ನಡೆಯಲಿರುವ, ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ. ಸ್ವಾಭಿಮಾನಿ ಸಮಾವೇಶದ ಬಗ್ಗೆ ಎಐಸಿಸಿಗೆ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ. ಆ ಪತ್ರ ಫೇಕ್ ಇರುಬಹುದು. ಈಗಾಗಲೇ ಮುಡಾ ವಿಚಾರದಲ್ಲಿ, ಮೈಸೂರಿನಲ್ಲಿ ಸಮಾವೇಶ ಮಾಡಲಾಗಿದೆ. ಜತೆಗೆ ಹಾಸನದಲ್ಲೂ ಭಾರೀ ಸಮಾವೇಶ ಮಾಡುತ್ತಿದ್ದೇವೆ, ಅಷ್ಟೇ. ಹಾಸನ ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ" ಎಂದು ತಿಳಿಸಿದರು.
ಇದೇ ವೇಳೆ "ಈ ಹಿಂದೆ ಹೆಚ್.ಡಿ.ಕೋಟೆ ಸಮಾರಂಭದಲ್ಲಿ ನಾನು ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಸ್ಪಷ್ಟೀಕರಣ ಕೊಡಲು ಪ್ರಯತ್ನಿಸಿದರು.
ಇದನ್ನೂ ಓದಿ: ಸದ್ಯಕ್ಕೆ ಸಂಪುಟ ಪುನಾರಚನೆ ಪ್ರಸ್ತಾವನೆ ಇಲ್ಲ: ಸಿಎಂ ಸಿದ್ದರಾಮಯ್ಯ