ಶಿವಮೊಗ್ಗ: "ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ನಾವು ಈ ಬಾರಿಯ ಲೋಕಸಭಾ ಚುನಾವಣೆಗೆ ಮತ ಕೇಳುತ್ತೇವೆ" ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಗ್ಯಾರಂಟಿ ಜನರಿಗೆ ತಾತ್ಕಾಲಿಕವಾದದ್ದು. ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೌರವ ವಿಶ್ವಾಸ ಹೆಚ್ಚಾಗುತ್ತಿದೆ. ಈ ಬಾರಿ ಎನ್ಡಿಎ 400 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದೆ" ಎಂದರು.
ಕುಮಾರ ಬಂಗಾರಪ್ಪ ವಿಚಾರಕ್ಕೆ ಪ್ರತಿಕ್ರಿಯೆ: "ನಾನು ಕುಮಾರ ಬಂಗಾರಪ್ಪ ಅವರ ಜೊತೆ ಫೋನ್ನಲ್ಲಿ ಮಾತನಾಡಿದೆ. ಚುನಾವಣೆ ಬಂದಿರುವುದರಿಂದ ತಮ್ಮ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸ ಇದೆ. ಅವರ ವೈಯಕ್ತಿಕ ಕೆಲಸ ಕಾರ್ಯದಲ್ಲಿ ಬ್ಯೂಸಿಯಾಗಿದ್ದರು. ಚುನಾವಣೆ ವೇಳೆ ಸಕ್ರಿಯೆರಾಗುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ವಿಚಾರ: "ಚುನಾವಣೆ ವೇಳೆ ನಮ್ಮ ಶಕ್ತಿ ಎಂದರೆ ಅದು ನಮ್ಮ ಕಾರ್ಯಕರ್ತರು. ನರೇಂದ್ರ ಮೋದಿ ಅವರ ರಾಷ್ಟ್ರೀಯ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸೋದು. ಯುವಕರು, ರೈತರು, ಮಹಿಳೆಯರಿಗೆ ನೀಡಿರುವ ಯೋಜನೆಗಳನ್ನು, ಅಭಿವೃದ್ಧಿ ವಿಚಾರಗಳನ್ನು ಮತದಾರರಿಗೆ ತಿಳಿಸುತ್ತೇವೆ. ಈ ಬಾರಿ ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಗೆಲ್ಲಲು, ಬಿಜೆಪಿ ಮತ ಸೆಳೆಯುವ ಕೆಲಸ ಮಾಡಲಿದೆ" ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಘೋಷಣೆ ವಿಚಾರ: "ಲೋಕಸಭಾ ಚುನಾವಣೆ ಕುರಿತು ನಾಳೆ ಹಾಗೂ ನಾಡಿದ್ದು ಮತ್ತೆ ಸಭೆ ನಡೆಯಲಿದೆ. 2 -3 ದಿನಗಳಲ್ಲಿ ಬಹುತೇಕ ಪಟ್ಟಿ ಅಂತಿಮವಾಗಲಿದೆ" ಎಂದರು.
ಶಿವಮೊಗ್ಗದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ನೇರ ಸ್ಪರ್ಧೆ: "ಬಂಗಾರಪ್ಪ ಅವರು ಚುನಾವಣೆಗೆ ನಿಂತಿದ್ದಾಗ ನೇರ ಸ್ಪರ್ಧೆ ಇತ್ತು. ಯಡಿಯೂರಪ್ಪ ಅವರು ಸ್ಪರ್ಧೆ ಮಾಡಿದಾಗ ತ್ರಿಕೋನ ಸ್ಪರ್ಧೆ ಇತ್ತು. ಎಲ್ಲ ಸವಾಲುಗಳನ್ನು ಎದುರಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಈ ಬಾರಿಯೂ ಆ ಸವಾಲು ಇದ್ದೇ ಇರುತ್ತದೆ. ಒಳ್ಳೆಯ ವಾತಾವರಣ ಇದೆ. ಆ ವಾತಾವರಣವನ್ನು ಮತವಾಗಿ ಪರಿವರ್ತನೆ ಮಾಡುತ್ತೇವೆ. ಮೋದಿ ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತೇವೆ" ಎಂದರು.
ಎಲ್ಪಿಜಿ ದರ ಕಡಿತ ಸ್ವಾಗತಾರ್ಹ: "ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕೊಡುಗೆಯಾಗಿ ಪ್ರಧಾನಿ ಮೋದಿ ಉಜ್ವಲ ಯೋಜನೆ ಸಿಲಿಂಡರ್ ಬೆಲೆಯನ್ನು 100 ರೂ ಕಡಿಮೆ ಮಾಡಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ, ಜೊತೆಗೆ ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ. ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಇದನ್ನೂ ಓದಿ: ನಾಳೆಯ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ: ಬಿ.ಎಸ್.ಯಡಿಯೂರಪ್ಪ