ದಾವಣಗೆರೆ: ಶಾಂತಿಸಾಗರದ ಮೂಲಕ ಚನ್ನಗಿರಿ, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಮತ್ತು ಬಹುಗ್ರಾಮ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ, ಮುಂದಿನ 20 ದಿನಗಳಿಗೆ ಮಾತ್ರ ಶಾಂತಿಸಾಗರದಲ್ಲಿ ನೀರಿನ ಸಂಗ್ರಹವಿದ್ದು, ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವು ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ಗಳಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಸೂಚನೆ ಕೊಟ್ಟರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಬುಧವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಶಾಂತಿಸಾಗರದಿಂದ ಎರಡು ಜಿಲ್ಲೆಗಳ ಪ್ರಮುಖ ಪಟ್ಟಣ, ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕೆರೆಗೆ ಅನಧಿಕೃತವಾಗಿ ಪಂಪ್‍ಸೆಟ್ ಅಳವಡಿಸಿಕೊಂಡು ಅಕ್ರಮವಾಗಿ ನೀರೆತ್ತಲಾಗುತ್ತಿದೆ. ಪರಿಣಾಮ ನೀರಿನ ಸಂಗ್ರಹ ತುಂಬಾ ಇಳಿಕೆಯಾಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆಯಾಗಲಿದೆ ಎಂದರು.
ಬೆಸ್ಕಾಂನಿಂದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿಕೊಟ್ಟಿದ್ದರಿಂದ ರೈತರು ಅನಧಿಕೃತವಾಗಿ ಕೆರೆಯಲ್ಲಿನ ನೀರು ಬಳಕೆ ಮಾಡುತ್ತಿದ್ದಾರೆ. ಅನಧಿಕೃತವಾಗಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳನ್ನು ತೆರವು ಮಾಡಲು ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಬೆಸ್ಕಾಂ ಇಂಜಿನಿಯರ್ಗೆ ಸೂಚನೆ ನೀಡಿದರು. ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಕಾಲುವೆ ಮೂಲಕ ನೀರು ಶೇಖರಣೆಗೆ ಕ್ರಮವಹಿಸಲಾಗುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.
ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾದಲ್ಲಿ ಖಾಸಗಿ ಕೊಳವೆಬಾವಿ ಸಿಗದಿದ್ದಲ್ಲಿ ತಕ್ಷಣವೇ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಬೇಕು. ದೂರದ ಆಧಾರದ ಮೇಲೆ ಈಗಾಗಲೇ ಪ್ರತಿ ಟ್ಯಾಂಕರ್ಗೆ ರೂ.500, 600, ಹಾಗೂ ರೂ.900 ರವರೆಗೆ ದರ ನಿಗದಿ ಮಾಡಲಾಗಿದೆ. ಟೆಂಡರ್ ಕರೆಯಲಾಗಿಲ್ಲ ಎಂದು ತಾಂತ್ರಿಕ ನೆಪವೊಡ್ಡಿ ಜನರಿಗೆ ನೀರು ಕೊಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರಸ್ಥಾನ ಬಿಡುವಂತಿಲ್ಲ: ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ವಿಕೋಪದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳು ಸದಾ ಸನ್ನದ್ದರಾಗಿರಬೇಕು. ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿವೆ ಎಂದು ಪರಿಶೀಲನೆ ನಡೆಸಿ ಆಳಕ್ಕೆ ಕೊರೆಯಬೇಕಾಗಿದ್ದಲ್ಲಿ ಅಂತಹ ಕೊಳವೆಬಾವಿಗಳ ವಿವರದೊಂದಿಗೆ ಪ್ರಸ್ತಾವನೆಯನ್ನು ಆಯಾ ತಾಲೂಕು ತಹಶೀಲ್ದಾರರಿಗೆ ಸಲ್ಲಿಸಬೇಕು ಎಂದರು.
ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ: ಜಿಲ್ಲೆಯಲ್ಲಿ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿ ಚನ್ನಗಿರಿ ಎರಡು ಪಂಚಾಯಿತಿ 7 ಕೊಳವೆಬಾವಿ 3 ಗ್ರಾಮಗಳು, ದಾವಣಗೆರೆ 2 ಗ್ರಾ.ಪಂ.ಗಳಲ್ಲಿ 3 ಕೊಳವೆಬಾವಿ 3 ಗ್ರಾಮ, ಹರಿಹರ 3 ಗ್ರಾ.ಪಂ.ಗಳಲ್ಲಿ 4 ಕೊಳವೆಬಾವಿ 4 ಗಾಮಗಳು, ಹೊನ್ನಾಳಿ 4 ಗ್ರಾ.ಪಂ. 4 ಕೊಳವೆಬಾವಿ 3 ಗ್ರಾಮಗಳು, ಜಗಳೂರು 3 ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಖಾಸಗಿ ಕೊಳವೆಬಾವಿಗಳ ಮೂಲಕ 4 ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 169 ಗ್ರಾಮಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ 171 ಕಡೆ ಖಾಸಗಿ ಬೋರ್ವೆಲ್ ಗುರುತಿಸಿ 89 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
18.77 ಕೋಟಿ ಲಭ್ಯ: ಬರಗಾಲ ಎದುರಿಸಲು ತುರ್ತು ಕೆಲಸಗಳಿಗಾಗಿ ಅಂದರೆ ಕುಡಿಯುವ ನೀರು, ಮೇವು ಪೂರೈಕೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ.16.10 ಕೋಟಿ, ಮತ್ತು ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ ರೂ.2.67 ಕೋಟಿ ಹಣವಿದ್ದು ಯಾವುದೇ ಅನುದಾನದ ಕೊರತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಮಳೆ ಕೊರತೆ: ಬೆಂಗಳೂರಿನ ಹಲವೆಡೆ ಕುಡಿಯುವ ನೀರು ಪೂರೈಕೆ ಸಮಸ್ಯೆ