ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ರಾತ್ರಿ ಉತ್ತಮ ಮಳೆಯಾದ ಪರಿಣಾಮ ಸಾರ್ವಜನಿಕ ಆಸ್ಪತ್ರೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಅಲ್ಲದೆ ಹೊನ್ನಾಳಿ ಪಟ್ಟಣದ ರಸ್ತೆಗಳು ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿದೆ. ಹೊನ್ನಾಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನೀರು ನುಗ್ಗಿದ್ದರಿಂದ ರಾತ್ರಿ ರೋಗಿಗಳು ತೊಂದರೆ ಎದುರಿಸಿದರು. ಆಸ್ಪತ್ರೆ ತುಂಬಾ ನೀರು ನಿಂತಿಕೊಂಡಿದ್ದರಿಂದ ಆಸ್ಪತ್ರೆ ಸಿಬ್ಬಂದಿ ನೀರಿನಲ್ಲಿ ತಿರುಗುತ್ತಾ ಕಾರ್ಯನಿರ್ವಹಿಸಿದರು.
ಕಳೆದ ದಿನ ಸಂಜೆಯಿಂದ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಇದರಿಂದ ಪಟ್ಟಣದ ಹಲವು ರಸ್ತೆಗಳು, ಹೊನ್ನಾಳಿಯ ಕೆಲ ಬಡಾವಣೆ, ಬೀದಿಗಳಲ್ಲೂ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ನೀರು ತುಂಬಿದೆ. ಅಧಿಕ ಮಳೆಯಿಂದ ಕ್ರೀಡಾಂಗಣದಿಂದ ಒಮ್ಮೆಲೆ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿತು. ಇದರಿಂದ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್, ಐಸಿಯು ಘಟಕಗಳು ನೀರಿನಿಂದ ತುಂಬಿದವು. ತಕ್ಷಣವೇ ಹೆರಿಗೆ ವಾರ್ಡ್‌ನಲ್ಲಿದ್ದ ಬಾಣಂತಿಯರು ಹಾಗೂ ಐಸಿಯು ಘಟಕದಲ್ಲಿನ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ರಾತ್ರೀ ಇಡಿ ಮಳೆ ನೀರನ್ನು ಹೊರಹಾಕುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿದ್ದರು.
ಹಳ್ಳದಲ್ಲಿ ಕೊಚ್ಚಿಹೋದ ಎಮ್ಮೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲೂ ಭಾರೀ ಮಳೆ ಆಗಿದೆ. ಕಳೆದ ದಿನ ಸಂಜೆ ಸುಮಾರಿಗೆ ಸುರಿದ ಭಾರಿ ಮಳೆಗೆ ಎಮ್ಮೆಯೊಂದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಆರುಂಡಿ ಗ್ರಾಮದ ರೈತ ಮುಳುಗಪ್ಪ ಮಲ್ಲೇಶಪ್ಪ ಎಂಬುವವರಿಗೆ ಸೇರಿದ ಎಮ್ಮೆ ಕೊಚ್ಚಿಕೊಂಡು ಹೋಗಿದೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಾದ್ಯಂತ ಭಾರೀ ಮಳೆ; ಹಳ್ಳ-ಕೊಳ್ಳಗಳು ಭರ್ತಿ - Ballari Rain