ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ, ಮತದಾನ ಕುರಿತು ಜಾಗೃತಿ ಮೂಡಿಸಲು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬಿಬಿಎಂಪಿ ಮತ್ತು ನಗರದ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ವಿಶೇಷ ವಾಕಥಾನ್‌ನಲ್ಲಿ ಸಾವಿರಾರು ಹೆಣ್ಣುಮಕ್ಕಳು, ನಾಗರಿಕರು ಅತ್ಯುತ್ಸಾಹದಿಂದ ಭಾಗವಹಿಸಿ ಅರಿವು ಮೂಡಿಸಿದರು.
ಮಾರತಹಳ್ಳಿಯ ಕಾವೇರಿ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ ಖ್ಯಾತ ನಟಿ ಪ್ರಣಿತ ಸುಭಾಷ್ ವಾಕಥಾನ್, ಬೈಕ್ ರ‌್ಯಾಲಿ ಮತ್ತು ಬೈಸಿಕಲ್ ರ‌್ಯಾಲಿಗೆ ಚಾಲನೆ ನೀಡಿದರು.
ಸುಮಾರು 500 ಬೈಕ್ಗಳು, 1200 ಸೈಕಲ್ಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಮಾರತಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ವಾಕಥಾನ್ ವೇಳೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಈ ವೇಳೆ ನಟಿ ಪ್ರಣಿತ ಸುಭಾಷ್ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾಗಿರುವ ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವ ಮೂಲಕ ಭಾಗವಹಿಸಬೇಕು. ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಈ ಮತದಾನ ಜಾಗೃತಿ ಕಾಯಕ್ರಮ ಆಯೋಜಿಸಿರುವುದು ಸ್ಪೂರ್ತಿದಾಯಕ. ನಾಗರಿಕರು ತಮಗೆ ಏನು ಬೇಕು? ಏನು ಬೇಡ? ಎನ್ನುವ ಕುರಿತಾದ ದೇಶದ ಅಭಿವೃದ್ಧಿ ಕುರಿತಾದ ಪರಿಕಲ್ಪನೆಗಳು ಸಾಕಾರಗೊಳ್ಳಲು ಮತದಾನದ ಹಕ್ಕು ಚಲಾಯಿಸುವುದು ಅವಶ್ಯಕ ಎಂದು ಹೇಳಿದರು.
ದೇಶದ ಐಟಿ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ನಾಗರಿಕರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ತಮ್ಮ ಪರಿಚಿತರಿಗೆ, ಸ್ನೇಹಿತರಿಗೆ ಮತದಾನ ಮಾಡುವಂತೆ ತಿಳಿಸಬೇಕು. ಪ್ರಜಾಪ್ರಭುತ್ವದ ಯಶಸ್ಸು ನಾಗರಿಕರು ಮತ ಚಲಾವಣೆಯಿಂದ ನಿರ್ಧಾರವಾಗುತ್ತದೆ ಎಂದು ಬಿಬಿಎಂಪಿ ವ್ಯಾಪ್ತಿ ಚುನಾವಣೆಗಳ ವಿಶೇಷ ಆಯುಕ್ತ ಡಾ. ಆರ್. ಸೇಲ್ವಮಣಿ ಹೇಳಿದರು.
ಚುನಾವಣೆ ಆಯೋಗದ ಮಾಧ್ಯಮ ಮುಖ್ಯಸ್ಥ ಜಡಿಯಪ್ಪ ಗೆದ್ಲಗಟ್ಟಿ, ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರನ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂಓದಿ:ಬೆಂಗಳೂರು ಪಾಲಿಕೆಯಿಂದ ಘನತ್ಯಾಜ್ಯ ವಿಂಗಡಣೆ ಕುರಿತು ಜನಜಾಗೃತಿ, ಬೀದಿ ನಾಟಕ ಪ್ರದರ್ಶನ