ಹುಬ್ಬಳ್ಳಿ: ಕುಟುಂಬವೊಂದರ ಅಜ್ಜಿ, ಮಗಳು ಹಾಗು ಮೊಮ್ಮಗಳು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಇಂದು ಮತದಾನ ಮಾಡಿ ವಿಶೇಷವಾಗಿ ಗಮನ ಸೆಳೆದರು. ಇವರಲ್ಲಿ ಮೊಮ್ಮಗಳು ತಪಸ್ಯಾ ಪ್ರಭು ಇದೇ ಮೊದಲ ಬಾರಿಗೆ ಮತ ಹಾಕಿ ಖುಷಿಪಟ್ಟರು. 79 ವರ್ಷದ ಅಜ್ಜಿ ರಜನಿ ಪ್ರಭು, ಮಗಳು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸೌಮ್ಯ ಪ್ರಭು, ಮೊಮ್ಮಗಳು ಮಾತ್ರವಲ್ಲದೇ ಇಡೀ ಪ್ರಭು ಕುಟುಂಬ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
ರಜನಿ ಪ್ರಭು ಅವರು ಶೇಕಡಾವಾರು ಮತದಾನ ಕಡಿಮೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. "ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದವರನ್ನು ಶಿಕ್ಷಿಸುವ ಕ್ರಮ ಜಾರಿಗೆ ಬರಬೇಕು. ಮತ ಚಲಾಯಿಸದ ಸರ್ಕಾರಿ ನೌಕರರಿಗೆ ಇಂಕ್ರಿಮೆಂಟ್ ಕೊಡಬಾರದು. ಹಾಗಾದಾಗ ಮಾತ್ರ ಮತದಾನದ ಪ್ರಮಾಣ ಜಾಸ್ತಿ ಆಗುತ್ತದೆ. ಮತದಾನ ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಸಂಭ್ರಮದಿಂದ ಆಚರಿಸಬೇಕು" ಎಂದು ಕರೆ ನೀಡಿದರು.
ಅಜ್ಜಿ, ಅಮ್ಮನ ಜೊತೆ ಮೊದಲ ಬಾರಿಗೆ ಮತ ಚಲಾಯಿಸಿದ ತಪಸ್ಯಾ ಪ್ರಭು, "ಮೊದಲ ಬಾರಿಗೆ ಮತದಾನ ಮಾಡಿದ್ದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ತಪ್ಪದೇ ಹಕ್ಕು ಚಲಾಯಿಸಬೇಕು" ಎಂದರು.
ಹಾವೇರಿಯಲ್ಲಿ ಬಿರುಸಿನ ಮತದಾನ: ಹಾವೇರಿ ನಗರದ ಮತದಾನ ಕೇಂದ್ರಗಳಲ್ಲಿ ವಯೋವೃದ್ಧರು ಹೆಚ್ಚಿನ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಕ್ಷೇತ್ರದ 1,982 ಮತ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಸರತಿ ಸಾಲಿನಲ್ಲಿ ನಿಂತು ಮತದಾರರು ಮತದಾನ ಮಾಡುತ್ತಿದ್ದಾರೆ.
ಮತಗಟ್ಟೆಗೆ ದಂಪತಿ ಸಮೇತರಾಗಿ ಆಗಮಿಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ ಅವರು ಗೆಳೆಯರ ಬಳಗ ಸ್ಕೂಲ್ನಲ್ಲಿರುವ ಮತಗಟ್ಟೆ 219ರಲ್ಲಿ ಮತದಾನ ಮಾಡಿದರು.
ಇದನ್ನೂ ಓದಿ: ಶಿವಮೊಗ್ಗ: ಕುಟುಂಬಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಬಿ.ಎಸ್.ಯಡಿಯೂರಪ್ಪ - Yediyurappa Casts Vote