ಚಾಮರಾಜನಗರ: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಾಮರಾಜನಗರ ಲೋಕ ಅಖಾಡದಲ್ಲಿ ಯಾವುದೇ ಅಕ್ರಮ ನಡೆಯಬಾರದು ಎಂದು ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇದೇ ಮೊದಲ ಬಾರಿ ಅಬಕಾರಿ ಇಲಾಖೆ ಮದ್ಯದಂಗಡಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ. ಚಾಮರಾಜನಗರದ ಮದ್ಯಗಂಡಿಗಳಲ್ಲಿ ಭಿತ್ತಿಪತ್ರ ಅಂಟಿಸಿ ಮದ್ಯಪ್ರಿಯರು ಮತದಾನದಿಂದ ದೂರ ಉಳಿಯದಂತೆ ಅರಿವು ಮೂಡಿಸುತ್ತಿದೆ.
ಗಡಿಜಿಲ್ಲೆಯಲ್ಲಿ 145ಕ್ಕೂ ಅಧಿಕ ಔಟ್ಲೆಟ್ಗಳಿದ್ದು ಎಲ್ಲೆಡೆ ಮತದಾನ ಜಾಗೃತಿ ಭಿತ್ತಿಚಿತ್ರ ಅಂಟಿಸಲಾಗಿದೆ. ಮದ್ಯದಂಗಡಿಗೆ ಹೋಗುವ ಮುನ್ನ, ಮದ್ಯ ಸೇವಿಸುವಾಗ ಜನರಿಗೆ ಕಾಣುವಂತೆ ಹಾಗೂ ಹೊರಹೋಗುವ ಸ್ಥಳಗಳಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದ್ದು, ಮತದಾನ ಜಾಗೃತಿ ವ್ಯಾಪ್ತಿಗೆ ಇದೇ ಮೊದಲ ಬಾರಿಗೆ ಮದ್ಯಪ್ರಿಯರನ್ನೂ ಸೇರಿಸಲಾಗಿದೆ. ಚಾಮರಾಜನಗರದಲ್ಲಿ 18 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಮದ್ಯಪ್ರಿಯರ ಸಂಖ್ಯೆ 5 ಲಕ್ಷ ದಷ್ಟಿದೆ. ಈ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಯು ಮದ್ಯಪ್ರಿಯರು ಮತದಾನದಿಂದ ದೂರ ಉಳಿಯದಂತೆ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ.
ರಾಜಕಾರಣಿಗಳ ಬಾರ್ ಮೇಲೆ ನಿಗಾ: ಜಿಲ್ಲೆಯಲ್ಲಿ ರಾಜಕಾರಣಿಗಳ ಮಾಲಿಕತ್ವ ಹಾಗೂ ಪ್ರಭಾವ ಇರುವ ಮದ್ಯದಂಗಡಿಗಳ ಮೇಲೆ ಅಬಕಾರಿ ಇಲಾಖೆ ನಿಗಾ ಇಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 41 ಮದ್ಯದಂಗಡಿಗಳನ್ನು ಪಟ್ಟಿ ಮಾಡಿ ನಿತ್ಯ ಖರೀದಿ, ದಾಸ್ತಾನು ಪರಿಶೀಲನೆ ಮಾಡುವ ಜೊತೆಗೆ ಈ ಹಿಂದೆ ಆಗಿರುವ ಖರೀದಿ, ಮಾರಾಟದ ಲೆಕ್ಕವನ್ನೂ ಅಬಕಾರಿ ಇಲಾಖೆ ತಾಳೆ ಹಾಕುವ ಕೆಲಸ ಮಾಡುತ್ತಿದೆ. ಅಕ್ರಮ ಮದ್ಯ ಸಂಗ್ರಹಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದೆ. ಅಬಕಾರಿ ಇಲಾಖೆಯು ಚುನಾವಣೆ ಹಿನ್ನೆಲೆ ತಪಾಸಣೆ, ಕಾರ್ಯಾಚರಣೆಗಳನ್ನು ಚುರುಕುಗೊಳಿಸಿ ಕಟ್ಟೆಚ್ಚರ ವಹಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಪೊಲೀಸ್ ಇಲಾಖೆ ಶ್ವಾನಗಳಿಗೆ ಶೂ ಭಾಗ್ಯ - shoes for dogs