ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದ್ದು, ಶೇ 70.03ರಷ್ಟು ಮತದಾನ ದಾಖಲಾಗಿದೆ. 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆಯಲ್ಲಿ ಶೇ 69.23ರಷ್ಟು ಮತದಾನವಾಗಿತ್ತು.
ನಿನ್ನೆಯ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇದೀಗ ಇವಿಎಂಗಳಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಂ ಸೇರಿದೆ.
2019ರ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಶೇಕಡಾವಾರು ಪ್ರಮಾಣ ಅಧಿಕವಾಗಿದೆ. ಕಳೆದ ಚುನಾವಣೆಯಲ್ಲಿ ಶೇ.68.66ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.70.03 ಮತದಾನವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
21 ಮಹಿಳೆಯರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಚುನಾವಣಾ ಕಣದಲ್ಲಿದ್ದಾರೆ.
ಎಲ್ಲಿ, ಎಷ್ಟು ಮತದಾನ?:
ಕ್ರ.ಸಂಖ್ಯೆ | ಕ್ಷೇತ್ರ | ಶೇಕಡಾ ಮತದಾನ |
1. | ಚಿಕ್ಕೋಡಿ | 76.99 |
2. | ಬೆಳಗಾವಿ | 71.00 |
3. | ಬಾಗಲಕೋಟೆ | 70.10 |
4. | ವಿಜಯಪುರ | 64.71 |
5. | ಕಲಬುರಗಿ | 61.73 |
6. | ರಾಯಚೂರು | 64.10 |
7. | ಬೀದರ್ | 63.55 |
8. | ಕೊಪ್ಪಳ | 69.87 |
9. | ಬಳ್ಳಾರಿ | 72.35 |
10. | ಹಾವೇರಿ | 76.78 |
11. | ಧಾರವಾಡ | 72.53 |
12. | ಉತ್ತರ ಕನ್ನಡ | 73.52 |
13. | ದಾವಣಗೆರೆ | 76.23 |
14. | ಶಿವಮೊಗ್ಗ | 76.05 |
ಶಾಂತಿಯುತ ಮತದಾನ: ಮತಯಂತ್ರಗಳಲ್ಲಿ ದೋಷ, ವಿವಿ ಪ್ಯಾಟ್ ಸಮಸ್ಯೆ, ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಆರಂಭದಲ್ಲಿ ಕೈಕೊಟ್ಟ ಮತಯಂತ್ರ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಸಣ್ಣಪುಟ್ಟ ಘಟನೆಗಳು ಕೆಲವೆಡೆ ವರದಿಯಾಗಿವೆ.
ನಿನ್ನೆ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡುಬಂತು. ಮಧ್ಯಾಹ್ನ ಬಿಸಿಲು ಹೆಚ್ಚಾಗುವ ಎಂಬ ಹಿನ್ನೆಲೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ರಾಜ್ಯದ 28 ಕ್ಷೇತ್ರದ ಮತದಾನ ಅಧಿಕೃತವಾಗಿ ಮುಕ್ತಾಯವಾಗಿದೆ. ಮಂಗಳವಾರ ನಡೆದ 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದರಲ್ಲಿ 1,29,48,978 ಪುರುಷರು, 1,29,66,570 ಮಹಿಳೆಯರು, 1945 ತೃತೀಯ ಲಿಂಗಿಗಳಿದ್ದಾರೆ. 6,90,929 ಯುವ ಮತದಾರರಿದ್ದಾರೆ.
14 ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 1.45 ಲಕ್ಷ ಮತಗಟ್ಟೆ ಅಧಿಕಾರಿಗಳು, 35,000 ಪೊಲೀಸರು, ಅರೆಸೇನಾ ಪಡೆಯ 65 ಕಂಪನಿಗಳನ್ನು ನಿಯೋಜಿಸಲಾಗಿತ್ತು.