ಉಡುಪಿ : ಪೊಡವಿಗೊಡೆಯನ ನಾಡು ಕೃಷ್ಣನಗರಿಯಲ್ಲಿ ಎಲ್ಲೆಲ್ಲಿ ನೋಡಿದರೂ ಭಕ್ತ ಸಾಗರ, ಹುಲಿ ವೇಷಧಾರಿಗಳ ಅಬ್ಬರ. ಪರ್ಯಾಯ ಶ್ರೀ ಪುತ್ತಿಗೆ ಮಠದ ಯತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಮಣ್ಮಯ(ಮಣ್ಣಿನ) ಮೂರ್ತಿಯನ್ನು ಜಲಸ್ಥಂಭನಗೊಳಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಹಬ್ಬವು ಸಮಾಪನಗೊಂಡಿತು.
ಶ್ರೀ ಕೃಷ್ಣನ ನಗರಿ ಇಂದು(ಮಂಗಳವಾರ)ಅಕ್ಷರಶಃ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಶ್ರೀ ಕೃಷ್ಣಾಷ್ಟಮಿಯ ಕೊನೆಯ ದಿನವಾದ ಇಂದು(ಮಂಗಳವಾರ) ವಿಟ್ಲಪಿಂಡಿಯ ಉತ್ಸವ ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಹುಲಿವೇಷಧಾರಿಗಳು ಹಾಗೂ ಅನೇಕ ಕಲಾತಂಡ, ತಮ್ಮ ಪ್ರದರ್ಶನ ತೋರಿ ವಿಟ್ಲಪಿಂಡಿ ಉತ್ಸವಕ್ಕೆ ಇನ್ನಷ್ಟು ಮೆರುಗು ತಂದರು. 3.30ರ ವೇಳೆಗೆ ಕೃಷ್ಣನ ಮಣ್ಮಯ (ಮಣ್ಣಿನ) ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ಚಿನ್ನದ ನವರತ್ನದಲ್ಲಿರಿಸಿ, ಪರ್ಯಾಯ ಶ್ರೀಗಳು ಪೂಜಿಸಿ, ಮಂಗಳಾರತಿ ಬೆಳಗಿದರು. ಆ ಬಳಿಕ ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ರಥೋತ್ಸವ ನಡೆಸಲಾಯಿತು.
ಶ್ರೀ ಕೃಷ್ಣನಿಗೆ 12 ಗಂಟೆ 7 ನಿಮಿಷದ ಪರ್ವ ಕಾಲದಲ್ಲಿ ಅರ್ಘ್ಯ ಪ್ರಧಾನ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಸಂಜೆಯ ಚಾಮರ ಸೇವೆ ಹಾಗೂ ರಾತ್ರಿ ಪೂಜೆ ಮಾಡಿ ಶ್ರೀ ಕೃಷ್ಣನಿಗೆ 12 ಗಂಟೆ 7 ನಿಮಿಷದ ಪರ್ವ ಕಾಲದಲ್ಲಿ ಅರ್ಘ್ಯವನ್ನು ನೀಡಿದರು. ನಂತರ ಗರ್ಭಗುಡಿಯ ಆವರಣದಲ್ಲಿರುವ ತುಳಸಿ ಕಟ್ಟೆಯಲ್ಲಿ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಸಹ ಅರ್ಘ್ಯ ಪ್ರಧಾನ ಮಾಡಿದರು.
ಮೊಸರು ತುಂಬಿದ ಮಡಿಕೆ ಓಡೆದು ಸಂಭ್ರಮಿಸಿದ ಗೊಲ್ಲ ವೇಷಧಾರಿಗಳು : ಶ್ರೀ ಕೃಷ್ಣ ಮಠದ ಎದುರು ಹಾಗೂ ರಥಬೀದಿಯಲ್ಲಿ ನಿರ್ಮಿಸಲಾದ ಗುರ್ಜಿಗಳಲ್ಲಿ ಮೊಸರು ತುಂಬಿದ ಮಡಿಕೆಗಳನ್ನು ನೇತುಹಾಕಲಾಗಿತ್ತು. ಅದನ್ನು ಕೃಷ್ಣನ ಜನ್ಮವನ್ನು ಸಾರುವ ಗೊಲ್ಲ ವೇಷಧಾರಿಗಳು ಒಡೆದು ವಿಟ್ಲಪಿಂಡಿಯನ್ನು ಸಂಭ್ರಮದಿಂದ ಆಚರಿಸಿದರು. ಅಷ್ಟಮಠಗಳ ಯತಿಗಳು ವಿಟ್ಲಪಿಂಡಿ ಹಬ್ಬದಲ್ಲಿ ಪಾಲ್ಗೊಂಡು ಇನ್ನಷ್ಟು ಸಾಥ್ನ್ನು ನೀಡಿದರು.
ಹುಲಿ ವೇಷಗಳ ಅಬ್ಬರ : ವಿಟ್ಲಪಿಂಡಿಯಂದು ಹುಲಿವೇಷ ಸೇರಿದಂತೆ ವಿವಿಧ ವೇಷಧಾರಿಗಳ ಕುಣಿತ ಪ್ರದರ್ಶನ ಹಾಗೂ ಸ್ಪರ್ಧೆಗಳು ನಡೆದಿದ್ದು, ಹುಲಿ ವೇಷಧಾರಿಗಳ ಅಬ್ಬರ ವೇದಿಕೆಯಲ್ಲಿತ್ತು.
ಬಂದ ಭಕ್ತಾಧಿಗಳಿಗೆ ಉಂಡೆ, ಚಕ್ಕುಲಿ ಪ್ರಸಾದ ವಿತರಣೆ : ಶ್ರೀ ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ ಹಬ್ಬಕ್ಕೆಂದು ಭಕ್ತರಿಗಾಗಿ ತಯಾರಿಸಲಾದ ಉಂಡೆ, ಚಕ್ಕುಲಿಯನ್ನು ಶ್ರೀ ಕೃಷ್ಣನಿಗೆ ನೈವೇದ್ಯ ಮಾಡಲಾಯಿತು. ಆ ಬಳಿಕ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿಯ ಹಬ್ಬದಲ್ಲಿ ಪಾಲ್ಗೊಂಡ ಅನೇಕ ಭಕ್ತರಿಗೆ, ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಉಂಡೆ, ಚಕ್ಕುಲಿಯ ಪ್ರಸಾದವನ್ನು ವಿತರಿಸಿದರು.
ಕೃಷ್ಣನ ಮಣ್ಮಯ(ಮಣ್ಣಿನ) ಮೂರ್ತಿ ಮಧ್ವಸರೋವರದಲ್ಲಿ ಜಲಸ್ಥಂಭನ : ಕೃಷ್ಣನ ಮಣ್ಮಯ(ಮಣ್ಣಿನ) ಮೂರ್ತಿ ನವರತ್ನದಲ್ಲಿರಿಸಿ ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವ ನಡೆಸಿ, ಬಳಿಕ ಮಧ್ವಸರೋವರದಲ್ಲಿ ಜಲಸ್ಥಂಭನ ಮಾಡುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಯು ಸಮಾಪನಗೊಂಡಿತು.
ಕಳೆದ ಹಲವಾರು ದಿನಗಳಿಂದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿಯ ಹಬ್ಬಕ್ಕೆ ಇಂದು ತೆರೆಬಿದ್ದಿತು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧಾ ಕಾರ್ಯಕ್ರಮ ಮೂಲಕ ಕಣ್ಮನ ಸೆಳೆದ ಶ್ರೀ ಕೃಷ್ಣಾಷ್ಟಮಿಯಲ್ಲಿ ಹಲವಾರು ಭಕ್ತರು ಪಾಲ್ಗೊಂಡು ಅಷ್ಟಮಿ ವಿಟ್ಲಪಿಂಡಿಯ ಹಬ್ಬದ ವೈಭವವನ್ನು ಕಣ್ತುಂಬಿಕೊಂಡು ಪುನೀತರಾದರು.
ಇದನ್ನೂ ಓದಿ : ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ವಿಟ್ಲಪಿಂಡಿ ಉತ್ಸವಕ್ಕೆ ಕ್ಷಣಗಣನೆ - SHRIKRISHNA JANMASHTAMI