ಮೈಸೂರು: ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಇಲ್ಲಿನ ಮೂರು ಗ್ರಾಮಗಳ ಜನರು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ನಂಜನಗೂಡು ತಾಲ್ಲೂಕಿನ ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಸೇರಿದ ರೈತರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಮತಯಾಚಿಸಲು ಡಾ.ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಹಾಗೂ ರೈತರು ತರಾಟೆ ತೆಗೆದುಕೊಂಡರು.
ಕಾರ್ಖಾನೆ ಬಳಿ ಕಳೆದ ಎರಡು ತಿಂಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ ಕಾರ್ಖಾನೆ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ನೀವು ಚುನಾವಣೆಗೋಸ್ಕರ ಇಲ್ಲಿಗೆ ಬಂದಿದ್ದೀರಿ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವನ್ನು ತಂದೆಯವರ ಗಮನಕ್ಕೆ ತರುವುದಾಗಿ ಎಂದು ಯತೀಂದ್ರ ಹೇಳುತ್ತಿದ್ದಂತೆ ಕೋಪಗೊಂಡ ಪ್ರತಿಭಟನಾಕಾರರು, ಇನ್ನೂ ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಸದಿದ್ದರೆ ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದಾಗ, ಪ್ರತಿಭಟನಕಾರರಿಗೆ ಉತ್ತರಿಸಲಾಗದೇ ಯತೀಂದ್ರ ಹಿಂತಿರುಗಿದರು.
ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ: ಪ್ರಹ್ಲಾದ್ ಜೋಶಿ - Prahlad Joshi