ಶಿವಮೊಗ್ಗ: ತನಗೆ ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಲೆಕ್ಕಾಧಿಕಾರಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಿಹದ ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾಧಿಕಾರಿ ವಿಮಲ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದಾರೆ. ಅನವಶ್ಯಕವಾಗಿ ವರ್ಗಾವಣೆ ಮಾಡುತ್ತಾರೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಡೆತ್ ನೋಟ್ ಬರೆದಿರುವ ವಿಮಲ, ತಹಶೀಲ್ದಾರ್ ಕಚೇರಿಯಲ್ಲಿ ನಿದ್ದೆ ಮಾತ್ರೆ ಸೇವಿಸಿದ್ದಾರೆ.
"ಈ ಹಿಂದೆ, ಹೆರಿಗೆ ಭತ್ಯೆ ಕೇಳಲು ಹೋಗಿದ್ದಾಗ ಇದೇ ತಹಶೀಲ್ದಾರ್ ಲಂಚ ಕೇಳಿದ್ದರು. ನನ್ನ ಪತಿ ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಲಂಚ ನೀಡಲು ನಿರಾಕರಿಸಿದೆ. ಅಂದಿನಿಂದ ವಿನಾಕಾರಣ ವರ್ಗಾವಣೆ ಮಾಡುತ್ತಿದ್ದಾರೆ. ಚುನಾವಣೆಯಿಂದಾಗಿ ಬೇರೆಡೆ ವರ್ಗಾವಣೆಯಾಗಿದ್ದ ತಹಶೀಲ್ದಾರ್ ಪುನಃ ಸಾಗರಕ್ಕೆ ವರ್ಗಾವಣೆಯಾದರು. ಹೀಗೆ, ವರ್ಗಾವಣೆ ಆಗುತ್ತಿದ್ದಂತೆಯೇ ನನ್ನನ್ನು ಬೇರೆಡೆ ವರ್ಗ ಮಾಡಿದ್ದಾರೆ. ತನಗೆ ಸಣ್ಣ ಮಗುವಿದೆ. ವರ್ಗಾವಣೆ ಬೇಡ ಎಂದು ಮನವಿ ಮಾಡಿದರೂ ಕೇಳಲಿಲ್ಲ" ಎಂದು ವಿಮಲ ಆರೋಪಿಸಿದ್ದಾರೆ.
ವಿಮಲ ಅವರ ಪತಿ ಸುರೇಶ್ ಪ್ರತಿಕ್ರಿಯಿಸಿ, "ವರ್ಗಾವಣೆಯಾಗಿ ತಹಶೀಲ್ದಾರ್ ಸಾಗರಕ್ಕೆ ಬಂದಾಗಿನಿಂದ ತಮ್ಮ ಮನೆಯವರಿಗೆ ಕಿರುಕುಳ ನೀಡುತ್ತಿದ್ದಾರೆ. ಇವರಿಗೆ ಹುಷಾರಿಲ್ಲ, ರಜೆ ಬೇಕು ಎಂದು ಕೇಳಿದರೂ ರಜೆ ನೀಡುತ್ತಿರಲಿಲ್ಲ. ಶಾಸಕರು ನಿಮ್ಮ ಮೇಲೆ ದೂರು ಹೇಳಿದ್ದಾರೆ ಎಂದು ತಹಶೀಲ್ದಾರ್ ಹೇಳಿದ್ದರು. ಸ್ಪಷ್ಟತೆಗಾಗಿ ನಾವೇ ಶಾಸಕರನ್ನು ಭೇಟಿ ಮಾಡಿದಾಗ ಅವರು ನನ್ನಿಂದ ಯಾವುದೇ ದೂರುಗಳಿಲ್ಲ ಎಂದು ಹೇಳಿದ್ದಾರೆ. ಈಗ ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ. ಮೊದಲು ಪತ್ನಿ ಹುಷಾರಾಗಿ ಬರಲಿ" ಎಂದರು.
ಇದನ್ನೂ ಓದಿ: ಕೋಲಾರ: ಆತ್ಮಹತ್ಯೆಗೆ ಶರಣಾದ ದಂಪತಿ - couple suicide