ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ನಡೆಯಿತು. ಆದರೆ ಈ ಸಭೆಗೆ ಮೇಯರ್ ಮೆಹಜಬೀನ್ ಹೊರ್ತಿ ಆಗಮಿಸಿದ್ದು ಟಾಂಗಾದಲ್ಲಿ.! ಈ ಮೂಲಕ ಅವರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ತಮಗೆ ಹಳೆಯ ವಾಹನವನ್ನು ನೀಡಲಾಗಿದೆ ಮತ್ತು ಆ ವಾಹನಕ್ಕೆ ಚಾಲಕನನ್ನು ನೀಡಿಲ್ಲ ಎಂದು ಈ ರೀತಿ ಅಸಮಾಧಾನ ಹೊರ ಹಾಕಿದ್ದಾರೆ.
ನಮ್ಮದೇ ಸರ್ಕಾರವಿದ್ದರೂ ಪಾಲಿಕೆ ಮೇಯರ್ಗೆ ವಾಹನ ವ್ಯವಸ್ಥೆ ಇಲ್ಲ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಮೇಯರ್ ಆರೋಪಿಸಿದರು. ಟಾಂಗಾದಲ್ಲಿ ಆಗಮಿಸಿದ್ದರಿಂದ ಸಾಮಾನ್ಯ ಸಭೆಗೆ ಮೇಯರ್ ತಡವಾಗಿ ಹಾಜರಾದರು.
ಪಾಲಿಕೆಯ ನಿಯಮದಂತೆ ನೂತನ ವಾಹನ ಖರೀದಿ ಅಥವಾ ಬಾಡಿಗೆ ವಾಹನ ಪಡೆಯಲು ಅವಕಾಶವಿದೆ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು. ಸಭೆ ಆರಂಭವಾಗುತ್ತಿದ್ದಂತೆ ಈ ವಿಚಾರವಾಗಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಬಿಜೆಪಿ ಸದಸ್ಯರು ಸಹ ಸಾಥ್ ಕೊಟ್ಟರು.
ಮೇಯರ್ ವಾಹನಕ್ಕೆ ಆದಷ್ಟು ಶೀರ್ಘ ಚಾಲಕನನ್ನು ನೇಮಕ ಮಾಡುವಂತೆ ಸರ್ವ ಸದಸ್ಯರಿಂದಲೂ ಆಗ್ರಹ ಕೇಳಿಬಂತು. ಆಗಿರುವ ಅಚಾತುರ್ಯಕ್ಕೆ ಸಭೆಯಲ್ಲಿ ಕ್ಷಮೆ ಕೇಳಿದ ಪಾಳಿಕೆ ಆಯುಕ್ತ ಬದ್ರುದ್ದೀನ್, ಲೋಪ ಸರಿಪಡಿಸುವುದಾಗಿ ಮತ್ತು ಚಾಲಕನನ್ನು ಒದಗಿಸದ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ: 'ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು': ಸಿಎಂ ಸಿದ್ದರಾಮಯ್ಯ