ಬೆಂಗಳೂರು: ಎಲ್ಲಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯು ಹೈಕಮಾಂಡ್ ನಿರ್ಧಾರವಾಗಿದ್ದು, ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಮುಂದೆ ವಿಧಾನಸಭೆ ಚುನಾವಣೆ ನಡೆದ್ರೂ ಸಹ ಆಗ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಚುನಾವಣಾ ಕಚೇರಿ ಆರಂಭಿಸಿದ್ದು, ಹನುಮಂತ ನಗರದಲ್ಲಿ ತೆರೆದಿರುವ ಕಚೇರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ನಿನ್ನೆ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಮೋದಿ ಅವರು 2024ರ ಚುನಾವಣಾ ರಣಕಹಳೆ ಮೊಳಗಿಸಿದರು. ಇಡೀ ದೇಶದಲ್ಲಿ ವಾತಾವರಣ ಹೇಗಿದೆ ಅಂದರೆ ನಮ್ಮ ರಾಜಕೀಯ ವಿರೋಧಿಗಳು ಕೂಡ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಅಂತ ಹೇಳುತ್ತಿದ್ದಾರೆ. ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬರೋದನ್ನ ಯಾರೂ ತಡೆಯಲು ಸಾಧ್ಯವಿಲ್ಲ. ಮೋದಿ ಅವರು ಕಲ್ಯಾಣ ಕರ್ನಾಟಕಕ್ಕೆ ಬಂದಿದ್ದರು. ಕರ್ನಾಟಕಕ್ಕೆ ಅವರ ಕೊಡುಗೆ ಏನು ಅಂತ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ಮೋದಿ ಅವರು ದೇಶಕ್ಕೆ, ಕನ್ನಡ ನಾಡಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಅಂತ ನಾನು ಹೇಳಲ್ಲ. ಜೂನ್ 4 ರಂದು ಮತ ಎಣಿಕೆ ಆಗುತ್ತಲ್ಲ, 28 ಕ್ಷೇತ್ರದಲ್ಲಿ ಜನ ಉತ್ತರ ಕೊಡ್ತಾರೆ ಎಂದರು.
ಹಗಲು, ರಾತ್ರಿ ದೇಶದ ಅಭಿವೃದ್ಧಿಗೆ ಮೋದಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಹತ್ತು ವರ್ಷದಲ್ಲಿ ಒಂದು ದಿನವೂ ವಿಶ್ರಮಿಸದೆ, ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸ್ವತಃ ಅವರ ತಾಯಿ ಮೋದಿ ಅವರಿಂದ ದೂರವಾದಾಗಲೂ ಮೋದಿ ಅವರು ಹೋಗಿ ಅಂತ್ಯಸಂಸ್ಕಾರ ಮಾಡಿ, ಆಗಲೇ ಮರಳಿ ಹೋಗಿ ಕೆಲಸದಲ್ಲಿ ಭಾಗಿಯಾಗಿದ್ದರು. ಹಿಂದಿನ ಯುಪಿಎ ಸರ್ಕಾರದಲ್ಲಿ ಅಮರಿಕಾಗೆ ಹೋದಾಗ ಭಿಕ್ಷಾ ಪಾತ್ರೆ ಹಿಡಿದು ಹೋಗುತ್ತಿದ್ದರು. ನಮ್ಮ ದೇಶದ ಪ್ರಧಾನಿ ಯಾವಾಗ ಹೋದರು ಯಾವಾಗ ಬಂದರು ಅನ್ನೋದು ಗೊತ್ತಾಗ್ತಿರಲಿಲ್ಲ. ಈಗ ಯಾವುದೇ ದೇಶಕ್ಕೆ ಹೋದರೂ ರತ್ನಗಂಬಳಿ ಹಾಸುತ್ತಾರೆ. ಅದನ್ನ ಮಾಡಿ ತೋರಿಸಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದು ವಿಜಯೇಂದ್ರ ಹೇಳಿದರು.
ತೇಜಸ್ವಿ ಸೂರ್ಯಗೆ ವಿಜಯೇಂದ್ರ ಕಿವಿಮಾತು: ಕೋವಿಡ್ ಸಂದರ್ಭದಲ್ಲಿ ದೇಶವನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿದ್ದು ಡೈನಾಮಿಕ್ ಲೀಡರ್ ಮೋದಿ. ಒಂದು ಕ್ಷಣವೂ ಬೇರೆಡೆ ಆಲೋಚಿಸದೆ ದೇಶದ ಬಗ್ಗೆ ಅಲೋಚಿಸೋದು ಮೋದಿ ಮಾತ್ರ. ನಮ್ಮ ದೇಶಕ್ಕೆ ಜಾಗತಿಕ ನಾಯಕತ್ವ ಕೊಟ್ಟಿದ್ದು ಹೆಮ್ಮೆಯ ಪ್ರಧಾನಿ ಮೋದಿ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತ ಪಕ್ಷಾತೀತವಾಗಿ, ಜಾತ್ಯತೀತವಾಗಿ ಹರಸುತ್ತಿದ್ದಾರೆ. ನಮ್ಮ ಹೆಮ್ಮೆಯ ಸಂಸದ ತೇಜಸ್ವಿ ಸೂರ್ಯ ಅವರು ಉತ್ತಮ ವಾಗ್ಮಿ ಅನ್ನೋದನ್ನು ಒಪ್ಪುತ್ತೇವೆ. ಯಡಿಯೂರಪ್ಪ ಅವರು ಹೇಳುತ್ತಿರುತ್ತಾರೆ ‘ಮಾತು ಕೆಲಸ ಆಗಬಾರದು, ಕೆಲಸ ಮಾತಾಗಬೇಕು’ ಅಂತ ಎಂದು ವಿಜಯೇಂದ್ರ ಸಲಹೆ ನೀಡಿದರು.
ರಾಜ್ಯಾಧ್ಯಕ್ಷ ಆಗಿ ಒಂದು ಮಾತು ಹೇಳುತ್ತೇನೆ.. 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ನಿರ್ಧಾರ. ಅದು ವಿಜಯೇಂದ್ರ ನಿರ್ಧಾರ ಅಲ್ಲ. 28 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಿ. ಮುಂದೆ ಯಾವಾಗಲೇ ವಿಧಾನಸಭೆ ಚುನಾವಣೆ ನಡೆಯಲಿ ಸ್ಪಷ್ಟ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇನೆ ಎಂದರು.
ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ: ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರ ದೇಶದಲ್ಲಿ ಇತಿಹಾಸ ಬರೆಯಲಿದೆ. ಕಳೆದ ಬಾರಿ ಬೆಂಗಳೂರು ಇತಿಹಾಸದಲ್ಲಿ 3 ಲಕ್ಷ ಅಂತರದಿಂದ ಗೆದ್ದು ಇತಿಹಾಸ ಬರೆದಿತ್ತು. ಈಗ ವಿಜಯೇಂದ್ರ ಇದ್ದಾರೆ, ಈ ಬಾರಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಐದು ಲಕ್ಷ ಮತಗಳ ಅಂತರದಿಂದ ಗೆದ್ದ ಸರ್ಟಿಫಿಕೆಟ್ ಜೂನ್ 4ರಂದು ಕೊಡುತ್ತೇನೆ. ಐತಿಹಾಸಿಕ ಗೆಲುವು ನೀಡಲು ಎಲ್ಲಾ ತಂಡ ಕೆಲಸ ಮಾಡುತ್ತಿದೆ. ಅಭೂತಪೂರ್ವ ಗೆಲುವು ಕೊಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆಲ್ಲಾ ಕ್ಷೇತ್ರದಲ್ಲಿ ವೀಕ್ಷಕರನ್ನು ಕಳಿಸಿ, ಅಭ್ಯರ್ಥಿ ಯಾರಾಗಬೇಕು ಅಂತ ಕೇಳಿದಾಗ ಅನೇಕ ಹೆಸರೇಳಿದ್ದರು. ಆದರೆ ಬೆಂಗಳೂರು ದಕ್ಷಿಣ ಮಾತ್ರ ಒಂದೇ ಹೆಸರು ಬಂದಿದೆ, ಅದು ನಿಮ್ಮದು ಅಂತ ಅಧ್ಯಕ್ಷರು ಹೇಳಿದ್ದರು. ಹೆಮ್ಮೆ ಮತ್ತು ಉತ್ಸಾಹದಿಂದ ಹೇಳಬಲ್ಲೆ. ನಮ್ಮೆಲ್ಲಾ ಬಿಜೆಪಿ ತಂಡ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಗಟ್ಟಿ ಮಾಡುವಲ್ಲಿ ಸಫಲರಾಗಿದ್ದೇವೆ. ಎಲ್ಲಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಲ್ಲೂ ಹಿಂದೆ ತೆಗೆದುಕೊಂಡ ಮತಕ್ಕಿಂತ ಹೆಚ್ಚು ಮತಗಳಿಸಿದೆ. ಗೋವಿಂದರಾಜನಗರ, ವಿಜಯನಗರ, ಬಿಟಿಎಂ ಲೇಔಟ್ ಹೆಚ್ಚಿನ ಮತ ತೆಗೆದುಕೊಂಡಿದೆ ಅಂದರೆ ಬಿಜೆಪಿ ಬೆಳೆದಿದೆ ಎಂದು ಅರ್ಥ ಎಂದರು.
10 ವರ್ಷಗಳ ಹಿಂದೆ ಪೇಪರ್ ತೆಗೆದು ನೋಡಿದರೆ ಕಲ್ಲಿದ್ದಲು ಹಗರಣ, 2ಜಿ ಹಗರಣ, ಭ್ರಷ್ಟಾಚಾರದ ಹಗರಣಗಳ ಸುದ್ದಿ ಓದುತ್ತಿದ್ದೆವು. ಈಗ ಪೇಪರ್ ತೆರೆದರೆ ದೇಶದ ಅಭಿವೃದ್ಧಿ ಬಗ್ಗೆ ಸುದ್ದಿ ಓದುತ್ತಿದ್ದೇವೆ. ವಿಶ್ವದಲ್ಲಿ ಐದನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆ ಭಾರತ ಆಗಿದೆ. ಮುಂಬೈ, ದೆಹಲಿ, ಗುವಾಹಟಿ ಯಾವುದೇ ರಾಜ್ಯ ತೆಗೆದರೆ ಟೆರರಿಸ್ಟ್ ಬಾಂಬ್ ಬ್ಲಾಸ್ಟ್ ಆಗುತ್ತಿದ್ದನ್ನ ನೋಡುತ್ತಿದ್ದೆವು. ದೇಶದ ಲಾ ಆಂಡ್ ಆರ್ಡರ್ ಕುಸಿದಿತ್ತು. ಈಗ ಜಮ್ಮು, ಕಾಶ್ಮೀರದಂತಹ ಪ್ರದೇಶದಲ್ಲಿ ಒಂದೂ ಫೈಯರ್ ಆಗದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುವ ಕೆಲಸ ಆಗಿದೆ. ಮೋದಿ ಅವರು ಭವ್ಯ ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ. ಅಂತಹ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿ ಆಗಿದ್ದೇವೆ. ಜಿಡಿಪಿ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿದ ಯುವಕರು, ಮೊದಲು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಿತ್ತು. ಈಗ ಕನ್ನಡದಲ್ಲೇ ಪರೀಕ್ಷೆ ಬರೆದು ಉದ್ಯೋಗ ಪಡೆಯಬಹುದಾಗಿದೆ. ಯು.ಎಸ್ ಕಾನ್ಸಲೇಟ್ ಅನ್ನು ಬೆಂಗಳೂರಿಗೆ ತರಲಾಗಿದೆ. ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಯಿತು. ಅಂತಹ ಘಟನೆಗೆ ಬೆಂಬಲ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೂ ಪೊಲೀಸರಷ್ಟೇ ವೇಗವಾಗಿ ಎನ್ಐಎ ತಂಡ ರೀಚ್ ಆಯಿತು. ಬೆಂಗಳೂರಿಗೆ ಎನ್ಐಎ ತಂಡವನ್ನ ಆರೇ ತಿಂಗಳಲ್ಲಿ ತಂದಿದ್ದೇವೆ. ಒಂದು ಲಕ್ಷದ ಐದು ಸಾವಿರ ಕೋಟಿ ಹಣವನ್ನು ಕಳೆದ ಐದು ವರ್ಷದಲ್ಲಿ ಬೆಂಗಳೂರಿಗೆ ಮೋದಿ ಕೊಟ್ಟಿದ್ದಾರೆ. ಕೆಂಪೇಗೌಡ ಟರ್ಮಿನಲ್ 2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತರಲಾಗಿದೆ. ಯುನೆಸ್ಕೋ ವಿಶ್ವದ ಅತ್ಯಂತ ಅದ್ಭುತ ಏರ್ಪೋರ್ಟ್ ಅಂತ ಹೇಳಿದೆ. 17 ಸಾವಿರ ಕೋಟಿ ಹಣವನ್ನು ಮೆಟ್ರೋ ಮಾರ್ಗಕ್ಕೆ ನೀಡಿದ್ದಾರೆ. ಬೆಂಗಳೂರು ಹೈವೇ ಸಂಪರ್ಕ ನೀಡುವ ಸ್ಯಾಟಲೈಟ್ ರಿಂಗ್ ರೋಡ್ಅನ್ನು ಮೋದಿ ನೀಡಿದ್ದಾರೆ. ಬೆಂಗಳೂರಿಗೆ 1,500 ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನೀಡಿದ್ದಾರೆ. 17 ಸಾವಿರ ಕೋಟಿ ವೆಚ್ಚದ ಸಬ್ ಅರ್ಬನ್ ರೈಲು ನೀಡಿದ್ದಾರೆ. ಬಡ ಜನರಿಗೆ ಜನೌಷಧಿ ಕೇಂದ್ರ ನೀಡಿದ್ದಾರೆ ಎಂದರು.
ಓದಿ: ಯಡಿಯೂರಪ್ಪ, ವಿಜಯೇಂದ್ರ ಕಪಿ ಮುಷ್ಟಿಯಲ್ಲಿ ರಾಜ್ಯ ಬಿಜೆಪಿ: ಕೆ.ಎಸ್.ಈಶ್ವರಪ್ಪ