ಗಂಗಾವತಿ: ವಿಶ್ವವಿಖ್ಯಾತವಾಗಿದ್ದ ವಿಜಯನಗರದ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಎಂಬುವುದು ಇತಿಹಾಸದಲ್ಲಿ ಪುಟದಲ್ಲಿ ಉಲ್ಲೇಖವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಆನೆಗೊಂದಿಯಲ್ಲಿ ವಿಜಯನಗರದ ಅರಸರ ಕಾಲಘಟ್ಟದಲ್ಲಿನ ಶಾಸನ, ಸ್ಮಾರಕದಂತ ಕುರುಹುಗಳು ಲಭಿಸುತ್ತಲೇ ಇರುತ್ತವೆ. ಇದೀಗ ವಿಜಯನಗರದ ಅರಸರ 1527ರ ಕಾಲಘಟ್ಟಕ್ಕೆ ಸಂಬಂಧಿಸಿದ್ದು ಎನ್ನಲಾದ ಶಿಲಾ ಶಾಸನವೊಂದು ಆನೆಗೊಂದಿ ಸಮೀಪದ ಕಡೇಬಾಗಿಲು ಎಂಬ ಗ್ರಾಮದಲ್ಲಿರುವ ಬೆಟ್ಟದ ಮೇಲಿನ ಕೋಟೆಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಸಮಾನ ಮನಸ್ಕ ಯುವಕರನ್ನೊಳಗೊಂಡ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಚಾರಣಕ್ಕೆ ಎಂದು ಈ ಬೆಟ್ಟಕ್ಕೆ ಹೋದಾಗ ಈ ಶಿಲಾ ಶಾಸನ ಕಂಡು ಬಂದಿದೆ. ದೊಡ್ಡ ಬಂಡೆಯಾಕಾರದ ಶಿಲೆಯ ಮೇಲೆಯೇ ಈ ಶಾಸನ ಬರೆಯಲಾಗಿದ್ದು, ಬಹುತೇಕ ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು. ಶಾಸನದ ಮೇಲಿದ್ದ ಮಣ್ಣಿನ ಪದರಗಳನ್ನು ಸ್ವಚ್ಛಗೊಳಿಸಿದ ಯುವಕರು ಬಳಿಕ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ ಅವರಿಗೆ ಮಾಹಿತಿ ನೀಡಿದ್ದಾರೆ.
ಶಾಸನ 1449ನೇ ಶಕ ವರ್ಷದ್ದು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಶೋಧಕ ಶರಣಬಸಪ್ಪ ಕೊಲ್ಕಾರ, "ಈ ಶಾಸನವನ್ನು ಪರಿಶೀಲಿಸಿದಾಗ 8 ಸಾಲುಗಳಲ್ಲಿದ್ದು, ಸ್ವಸ್ತಿ ಶ್ರೀ ಜಯದ್ ಉದಯ ಶಾಲಿವಾಹನ ಶಕ ವರ್ಷ 1449ನೇ ಕಾಲವನ್ನು ಉಲ್ಲೇಖಿಸಲಾಗಿದೆ. ಅದು ಪ್ರಸಕ್ತ ಶಕ 1527ಕ್ಕೆ ಸರಿಯಾಗುತ್ತದೆ. ಶಾಸನದಲ್ಲಿ ಆನೆಗೊಂದಿಯ ಮಹಾ ಪ್ರಧಾನರಾಗಿದ್ದ ಲಕ್ಕಿ ಶೆಟ್ಟಿಯ ಮಗನಾದ ವಿಜಯನಾಥನು ಬೆಟ್ಟದ ಮೇಲಿನ ವೀರಭದ್ರ ದೇವರನ್ನು ಆರಾಧಿಸುತ್ತಿದ್ದ ಸಂಗತಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಶಾಸನದಲ್ಲಿ ಪ್ರಾಸಂಗಿಕವಾಗಿ ಆನೆಗೊಂದಿಯನ್ನು ಹಸ್ತಿನಾವತಿ ಎಂದು, ಅದು ಪಂಚಕೋಶ ಮಧ್ಯದಲ್ಲಿ ಇತ್ತು ಎಂದು ಹೇಳಲಾಗಿದೆ. ಅಲ್ಲದೇ ಆನೆಗೊಂದಿಗೆ ಕಿಷ್ಕಿಂಧ ಪರ್ವತ ಎಂದು ಕೂಡ ಹೆಸರಿತ್ತು ಎಂದು ಉಲ್ಲೇಖಿಸಲಾಗಿರುವುದು ಗಮನಾರ್ಹ ಸಂಗತಿ. ಇದು ಐತಿಹಾಸಿಕವಾಗಿ ಅತ್ಯಂತ ಮಹತ್ವದ ದಾಖಲೆಯಾಗಲಿದೆ" ಎಂದು ಕೋಲ್ಕಾರ ತಿಳಿಸಿದ್ದಾರೆ.
"ಆನೆಗೊಂದಿಯೇ ರಾಮಾಯಣ ಕಾಲದ ಕಿಷ್ಕಿಂಧಾ ಎಂದು ಗುರುತಿಸಲು ನೇರವಾಗಿ ಇಲ್ಲಿಯವರೆಗೂ ಯಾವುದೇ ಐತಿಹಾಸಿಕ ದಾಖಲೆ ಅಥವಾ ಶಾಸನ ಬದ್ಧ ಐತಿಹ್ಯಗಳು ಆನೆಗೊಂದಿಯಲ್ಲಿ ಲಭಿಸಿರಲಿಲ್ಲ. ಹೀಗಾಗಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ" ಎಂದು ತಿಳಿಸಿದರು.
"ಆನೆಗೊಂದಿಯಿಂದ ದೂರದ ದೇವಘಾಟ್ ಮತ್ತು ಹುಲಿಗಿಗಳ ಶಾಸನಗಳಲ್ಲಿ ಮಾತ್ರ ಕಿಷ್ಕಿಂಧೆಯ ಉಲ್ಲೇಖವಿತ್ತು. ಪ್ರಸ್ತುತ ಆನೆಗೊಂದಿಯ ಈ ಶಾಸನವೇ ಕಿಷ್ಕಿಂಧಾ ಪರ್ವತ ಎಂದು ಉಲ್ಲೇಖಿಸಿರುವುದು, ಕಿಷ್ಕಿಂಧ ಮತ್ತು ಆಂಜನೇಯನ ಜನ್ಮಸ್ಥಳಗಳ ಬಗೆಗಿನ ವಾದ - ಪ್ರತಿ ವಾದಗಳ ಸಂದರ್ಭದಲ್ಲಿ ಈ ಉಲ್ಲೇಖ ತುಂಬಾ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯೇ ಅಂಜನಾದ್ರಿ ಬೆಟ್ಟ ಎನ್ನಲು ಹಾಗೂ ಆಂಜನೇಯನ ಜನ್ಮಸ್ಥಳವೆಂದು ಗುರುತಿಸಲು ಈ ಶಾಸನ ಮತ್ತೊಂದು ಐತಿಹಾಸಿಕ ದಾಖಲೆಯಾಗಿದೆ" ಎಂದು ಡಾ. ಕೋಲ್ಕಾರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಗೋವಾದಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ