ವಿಜಯನಗರ: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಜಯನಗರ ಜಿಲ್ಲೆ ಶೈಕ್ಷಣಿಕವಾಗಿ 10ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಇದಕ್ಕೆ ನಿಮ್ಮನ್ನೇ ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು.
ಎಸ್ಎಸ್ಎಲ್ಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಪ್ರಮಾಣ ಕುಸಿದಿರುವುದಕ್ಕೆ ನೀವೇ ಕಾರಣ. ನಿಮ್ಮ ಬಿಇಒಗಳು, ಶಿಕ್ಷಕರ ಪ್ರಯತ್ನ ಏನು?. ಯಾವ ದಿಕ್ಕಿನಲ್ಲಿದೆ?. ಈ ಕಳಪೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನೀವೇ ಹೇಳಿ ಎಂದು ಡಿಡಿಪಿಐಗೆ ಪ್ರಶ್ನಿಸಿದರು. ಈ ಬಾರಿ ಶೇ.20ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಎಂದು ಕೇಳಿದರು.
10ರಿಂದ 27ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಪ್ರಶ್ನಿಸಿದರು. ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸರ್ಕಾರದ ಕಾರ್ಯದರ್ಶಿಯನ್ನು ಸಂಪರ್ಕಿಸಿ ಅಮಾನತಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಕರೆ ಮಾಡಿದ ಸಿಎಂ, ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒಗೆ ನೋಟಿಸ್ ನೀಡಬೇಕು ಎಂದು ಸೂಚಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಭೀರವಾಗಿ ಯೋಜನೆಗಳನ್ನು ರೂಪಿಸುವಂತೆ ತಿಳಿಸಿದರು. ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಸಭೆಯಿಂದ ಹೊರನಡೆಯುವಂತೆ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಚಿವರು, ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಿಎಂ, ಶಿಕ್ಷಣದ ವಿಚಾರವಾಗಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ನೀರು, ಮೇವು, ನರೇಗಾ ಉದ್ಯೋಗಕ್ಕೆ ಯಾವ ಕಾರಣಕ್ಕೂ ತೊಂದರೆಯಾಗಬಾರದು. ಪಿಡಿ ಖಾತೆಯಲ್ಲಿರುವ ಹಣವನ್ನು ಇದಕ್ಕಾಗಿ ಸರಿಯಾಗಿ ಬಳಸಬೇಕು. ಕೆರೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಸಬೇಕು. ಒತ್ತುವರಿಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾ ಮೂಲಕ ಕೆರೆ ಹೂಳು ತೆಗೆದು ಕೆರೆಗಳಿಗೆ ಮರುಜೀವ ನೀಡಬೇಕು ಎಂದು ಸೂಚನೆ ನೀಡಿದರು.
52 ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸಲು ಏನು ಸಮಸ್ಯೆ?. ಇದಕ್ಕೆ ಅಧಿಕಾರಿಗಳು, ಕೆಲವು ಬೋರ್ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎಂದರು. ಇದಕ್ಕೆ ಗರಂ ಆದ ಸಿಎಂ, ರಿಪೇರಿ ಮಾಡಿದ್ದು ಇಲಾಖೆಯವರೇ ತಾನೇ?, ಪದೇ ಪದೇ ಕೆಟ್ಟು ಹೋಗುವ ರೀತಿ ರಿಪೇರಿ ಯಾಕೆ ಮಾಡ್ತಾರೆ?. ಅದರಲ್ಲಿ ಏನಾದರೂ ರಿಪೇರಿಯಾಗದ ಸಮಸ್ಯೆ ಇದೆಯಾ ಎಂಬುದನ್ನು ಪರಿಶೀಲಿಸಿ ಎಂದು ತಾಕೀತು ಮಾಡಿದರು.
ಇನ್ನು ಮೋಟಾರ್ ಕಳ್ಳರು ಯಾರು?. ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಗೊತ್ತಿರುತ್ತದೆ. ಹೀಗಿದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?, ಮಟ್ಕಾ, ಬೆಟ್ಟಿಂಗ್, ಜೂಜು ಹೆಚ್ಚಾಗಿದೆ ಎನ್ನುವ ವರದಿಗಳಿವೆ. ಇವನ್ನೆಲ್ಲಾ ಸಂಪೂರ್ಣವಾಗಿ ನಿಲ್ಲಿಸಲು ಏಕೆ ಸಾಧ್ಯವಾಗಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಕೇವಲ ನಿಯಂತ್ರಣ ಸಾಲಲ್ಲ. ಸಂಪೂರ್ಣವಾಗಿ ನಿಲ್ಲಿಸಬೇಕು. ಮುಂದಿನ ಮೂರು ತಿಂಗಳುಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಬಂದ್ ಆಗಬೇಕು. ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಶೌಚಾಲಯಗಳಿಲ್ಲದ ಮನೆಗಳು ಇವೆಯೇ ಎಂದು ಸಿಎಂ ಕೇಳಿದರು. ಇದಕ್ಕೆ ಇದೆ ಎಂದು ಅಧಿಕಾರಿಗಳು ವರದಿ ನೀಡಿದರು. ಹಾಗಿದ್ದರೆ ಜಿಲ್ಲೆಯನ್ನು ಶೌಚಾಲಯಮುಕ್ತ ಜಿಲ್ಲೆ ಎಂದು ಘೋಷಿಸಿದ್ದೇಕೆ ಎಂದ ಮುಖ್ಯಮಂತ್ರಿಗಳು, ನೀವು ಕೊಡುವ ತಪ್ಪು ಮಾಹಿತಿಯನ್ನು ನಾವು ಅಧಿವೇಶನದಲ್ಲಿ ಹೇಳುವುದಕ್ಕೆ ಆಗುತ್ತದೆಯೇ ಎಂದರು. ಸರ್ಕಾರಕ್ಕೆ ಸುಳ್ಳು ಮತ್ತು ತಪ್ಪು ಮಾಹಿತಿ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.
ಪಿಡಿಒಗಳ ಮೂಲಕ ಮನೆ ಮನೆ ಸಮೀಕ್ಷೆ ಮಾಡಿ. ಎಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ, ಶೌಚಾಲಯಗಳಿದ್ದಿದ್ದರೂ ಅವರೇಕೆ ಶೌಚಾಲಯಗಳಿಗಾಗಿ ಅರ್ಜಿ ಸಲ್ಲಿಸುತ್ತಿಲ್ಲ?. ಎಷ್ಟು ಶೌಚಾಲಯಗಳ ಅಗತ್ಯವಿದೆ. ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಸಂಪೂರ್ಣ ವಿವರವನ್ನು ಸಿಎಂ ಕೇಳಿದರು. ಮುಂದಿನ ಸಭೆಯೊಳಗೆ ಸಮೀಕ್ಷೆ ಮುಗಿದು ಶೌಚಾಲಯಗಳ ನಿರ್ಮಾಣ ಆಗಿರಬೇಕು ಎಂದು ಸೂಚಿಸಿದರು.
ಊರಿನ ಹೊರಗಿರುವ ಬೋರ್ಗಳ ಮೋಟಾರ್ಗಳನ್ನು ಕದಿಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಹಾಗಿದ್ದರೆ ಏಕೆ ಇದುವರೆಗೂ ದೂರು ದಾಖಲಿಸಿಲ್ಲ?. ಕಳ್ಳರ ಮೇಲೆ ನೀವು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?. ಇದರಿಂದ ಸರ್ಕಾರಕ್ಕೆ ನಷ್ಟವಾತ್ತಿದೆ. ಈ ನಷ್ಟಕ್ಕೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಇದನ್ನೂ ಓದಿ: 'ನನ್ನ ರಾಜಕೀಯ ಅಂತ್ಯದ ಬಗ್ಗೆ ತೀರ್ಮಾನ ಮಾಡುವುದು ಜನರು': ಡಿ.ಕೆ. ಶಿವಕುಮಾರ್ - DCM DK Shivakumar