ಕೊಪ್ಪಳ: ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಮಾತನಾಡಿದ್ದೇನೆ. ಸಮಸ್ಯೆ ಬಗೆಹರಿಯಲಿದೆ. ಇನ್ನೆರಡು ದಿನದಲ್ಲಿ ಪಕ್ಷದ ಅಭ್ಯರ್ಥಿ ಪರ ಅವರು ಪ್ರಚಾರಕ್ಕೆ ಬರಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಹೇಳಿದರು.
ನಗರದ ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ಗುರುವಾರ ರಾತ್ರಿ ಸಂಸದರೊಂದಿಗೆ ಮಾತುಕತೆ ನಡೆಸಿದ ರವಿಕುಮಾರ್, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷ ಎಂದ ಮೇಲೆ ಸಣ್ಣಪುಟ್ಟ ಗೊಂದಲ ಸಾಮಾನ್ಯ. ಸಂಗಣ್ಣ ಕರಡಿಯವರಿಗೆ ಯಾವ ಕಾರಣಕ್ಕೆ ಟಿಕೆಟ್ ತಪ್ಪಿದೆ ಎನ್ನುವ ಕಾರಣ ಬೇಕಿದೆ. ಅವರು ಒಳ್ಳೆಯ ಕೆಲಸಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಪಕ್ಷದ ತೀರ್ಮಾನವನ್ನು ಗೌರವಿಸಬೇಕಿದೆ. ಹೀಗಾಗಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಬೆಂಗಳೂರಿಗೆ ಬರಲು ಒಪ್ಪಿದ್ದು, ವರಿಷ್ಠರೊಂದಿಗೆ ಮಾತುಕತೆ ನಡೆಸಿ, ಸಂಸದರ ಸಮಸ್ಯೆ ಬಹೆಹರಿಸಲಾಗುವುದು. ಅದಾದ ಬಳಿಕ ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದರು.
ನಾನೆಲ್ಲೂ ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ: ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಹೇಳಿಕೆಗೆ ಸಂಸದ ಸಂಗಣ್ಣ ಕರಡಿ ಪ್ರತ್ರಿಕ್ರಿಯಿಸಿ, ರವಿಕುಮಾರ್ ಬಗ್ಗೆ ನನಗೆ ಗೌರವ ಇದೆ. ಅವರು ನನಗೆ ಬಿಜೆಪಿಯಲ್ಲೇ ಉಳಿಯಬೇಕು ಎಂದು ಮನವಿ ಮಾಡಿದ್ದಾರೆ. ಈ ಮುಂಚೆ ನಾನು ಎಲ್ಲಿಯೂ ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ. ನಿಮ್ಮ ಜೊತೆಯಲ್ಲಿ ನಾವಿರುತ್ತೇವೆ. ಬೆಂಗಳೂರಿಗೆ ಬನ್ನಿ ಅಲ್ಲಿ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ಮಾಡೋಣ. ಅವರು ಯಾವಾಗ ಸಮಯ ಕೊಡುತ್ತಾರೋ ಅವತ್ತು ಬೆಂಗಳೂರಿಗೆ ಹೋಗಿ ನಾಯಕರ ಜೊತೆ ಚರ್ಚೆ ಬಳಿಕ ಪ್ರಚಾರಕ್ಕೆ ಹೋಗುವೆ ಎಂದು ಹೇಳಿದರು.
ಕೊಪ್ಪಳ ಕಾಂಗ್ರೆಸ್ ಟಿಕೆಟ್ ರಾಜಶೇಖರ ಹಿಟ್ನಾಳ್ಗೆ: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ರಾತ್ರಿ ಅಧಿಕೃತ ಅಭ್ಯರ್ಥಿ ಘೋಷಣೆಯಾಗಿದ್ದು, ನಿರೀಕ್ಷಿತ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳಗೆ ಟಿಕೆಟ್ ಲಭಿಸಿದೆ. ಈ ಹಿನ್ನೆಲೆಯಲ್ಲಿ ಹಿಟ್ನಾಳ ಕುಟುಂಬ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿ ಸಂಚಾರ ನಡೆಸಿದ್ದ ರಾಜಶೇಖರ ಗವಿಮಠದ ಗವಿಶ್ರೀಗಳ ಆಶಿರ್ವಾದ ಪಡೆಯುವ ಮೂಲಕ ಈಗಾಗಲೇ ಒಂದು ಸುತ್ತು ಪ್ರಮುಖ ನಾಯಕರ ಮನೆಗೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಕಾಂಗ್ರೆಸ್ ವತಿಯಿಂದ ರಾಜಶೇಖರ ಹಿಟ್ನಾಳ ಕಳೆದ ಎರಡು ಅವಧಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ವಿರುದ್ಧ ಸೋತಿದ್ದರು. ಕಳೆದ ಬಾರಿ ಅತ್ಯಂತ ಕಡಿಮೆ ಅಂತರದಲ್ಲಿ ಕೇವಲ 30 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಈ ಬಾರಿ ಗೆಲ್ಲುವ ಉತ್ಸಾಹದಲ್ಲಿರುವ ರಾಜಶೇಖರ ಸನ್ನದ್ಧರಾಗಿದ್ದಾರೆ.
ಇಂದು ಕೊಪ್ಪಳ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಭೆ: ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಫುಲ್ ಆ್ಯಕ್ಟಿವ್ ಆದ ಕಾಂಗ್ರೆಸ್ ಇಂದು ಚುನಾವಣೆಯಲ್ಲಿ ಗೆಲುವಿನ ಕಾರ್ಯತಂತ್ರ ಕುರಿತು ಚರ್ಚಿಸಲು ಕೊಪ್ಪಳದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಸಚಿವ ಶಿವರಾಜ ತಂಗಡಗಿ ಸೇರಿ ಹಲವರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕ್ಷೇತ್ರದ ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು ಭಾಗಿಯಾಗಿ ಗೆಲುವಿನ ತಂತ್ರ ರೂಪಿಸಲಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯರ ಪ್ರತಿಷ್ಠೆಯ ಕ್ಷೇತ್ರ: ಚಾಮರಾಜನಗರದಿಂದ ಯಾರಿಗೆ ಟಿಕೆಟ್? - Chamarajanagar Congress Ticket