ಬೆಂಗಳೂರು: ಹಿರಿಯ ಸಾಹಿತಿ, ನಾಡೋಜ ಡಾ.ಕಮಲ ಹಂಪನಾ (89) ಅವರು ಹೃದಯಾಘಾತದಿಂದ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ''ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಕೋರುವೆ'' ಎಂದು ಕಂಬನಿ ಮಿಡಿದಿದ್ದಾರೆ.
ಡಾ.ಕಮಲಾ ಹಂಪನಾ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ''ಡಾ.ಕಮಲಾ ಹಂಪನಾ ಅವರು ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ, ಕಥೆ, ಕಾದಂಬರಿ, ವಿಮರ್ಶೆ, ವೈಚಾರಿಕ ಸಾಹಿತ್ಯ, ಶಿಶು ಸಾಹಿತ್ಯ, ಅನುವಾದ ಹಾಗೂ ಸಂಶೋಧನಾ ಸಾಹಿತ್ಯ.. ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಮೂಲ್ಯವಾದ ಕೃತಿಗಳನ್ನು ರಚಿಸಿದ್ದ ಡಾ. ಕಮಲಾ ಹಂಪನಾ ಅವರು ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯ ಮುಂತಾದ ಕಡೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಬಹಳ ದೊಡ್ಡ ಶಿಷ್ಯ ಪರಂಪರೆಯನ್ನು ಹೊಂದಿದ್ದಾರೆ''.
''71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು, ನಾಡೋಜ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರ ಇಡೀ ಕುಟುಂಬ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅನನ್ಯವಾದ ಕೊಡುಗೆಯನ್ನ ನೀಡುತ್ತಿದೆ. ಭಗವಂತ ಕುಟುಂಬಕ್ಕೆ ಅವರ ಅಗಲಿಕೆಯ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಕನ್ನಡ ಸಾಂಸ್ಕೃತಿಕ ಲೋಕ ಅವರನ್ನು ಸದಾ ಗೌರವಪೂರ್ವಕವಾಗಿ ನೆನಪಿಸಿಕೊಳ್ಳುತ್ತದೆ'' ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
''ಆರು ದಶಕಗಳಿಗೂ ಹೆಚ್ಚು ಕಾಲ ಬೋಧನೆ, ಸಂಶೋಧನೆ ಮತ್ತು ಸಾಹಿತ್ಯ ರಚನೆಗಳಲ್ಲಿ ನಿರತರಾಗಿದ್ದ ಕಮಲಾ ಹಂಪನಾ ಅವರು ಮಹಿಳಾ ಸಬಲೀಕರಣ ಮತ್ತು ಸೃಜನಶೀಲತೆಯ ಪ್ರತೀಕದಂತಿದ್ದರು. ಸಾಹಿತ್ಯದಲ್ಲಿ ಒಂದು ಉನ್ನತ ಮಾದರಿಯನ್ನು ನಿರ್ಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ'' ಎಂದು ಸಚಿವ ಎಂ.ಬಿ.ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
''ಸಜ್ಜನಿಕೆ ಮತ್ತು ಸುಸಂಸ್ಕೃತಿಗಳ ಸಂಗಮವಾಗಿದ್ದ ಕಮಲಾ ಅವರ ನಿಧನದಿಂದ ಕನ್ನಡ ಸಾಹಿತ್ಯದ ಚೇತನವೊಂದು ಕಣ್ಮರೆಯಾದಂತಾಗಿದೆ. ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬದ ಸದಸ್ಯರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ'' ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ: ಎರಡು ದಿನ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ - Rain Red Alert
ಬಿಜೆಪಿ ನಾಯಕರಿಂದ ಸಂತಾಪ: ಡಾ. ಕಮಲಾ ಹಂಪನಾ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
''ನಾಡಿನ ಖ್ಯಾತ ಸಾಹಿತಿಗಳು ಹಾಗೂ ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ತಮ್ಮ ಲೇಖನಗಳು, ಸಂಶೋಧನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾಗಿದ್ದರು. ಮೂಡಬಿದಿರೆಯಲ್ಲಿ ನಡೆದ 71 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಹೆಮ್ಮೆ ತಂದಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಸಾಹಿತ್ಯ ಲೋಕ ಬಡವಾದಂತಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ'' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಕ್ಸ್ ಪೋಸ್ಟ್ನಲ್ಲಿ ಪ್ರಾರ್ಥಿಸಿದ್ದಾರೆ.
ಬಿಎಸ್ವೈ ಸಂತಾಪ: ''ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ ನಿಧನರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿ ಎನಿಸಿದ್ದ ನಾಡೋಜ ಕಮಲ ಹಂಪನಾ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಹಿರಿಯ ಲೇಖಕಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತೇನೆ, ಅವರ ಕುಟುಂಬದವರು, ಅಭಿಮಾನಿಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ'' ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
''ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಬಲು ಅಪರೂಪದ ಹಂಪನಾ ದಂಪತಿಗಳ ಜೋಡಿಯ ಕೊಡುಗೆ ಅನುಪಮವಾದುದು. ಕರ್ನಾಟಕದ ಅಗ್ರಗಣ್ಯ ಮಹಿಳಾ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ಅವರ ನಿಧನಕ್ಕೆ ಸಂತಾಪ ಕೋರುತ್ತೇನೆ. ನಾಡು ನುಡಿಯ ಬಗೆಗಿನ ಅನುಪಮ ಪ್ರೀತಿ, ನಿರಂತರ ಪರಿಶ್ರಮ ಅವರ ಸಾಹಿತ್ಯಿಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಶೈಕ್ಷಣಿಕ ವಲಯದಲ್ಲೂ ಅಪಾರ ಶಿಷ್ಯವೃಂದ ಹೊಂದಿದ್ದ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದು ವಿದ್ವಾಂಸರಾಗಿ, ಉತ್ತಮ ಪ್ರಾಧ್ಯಾಪಕಿಯಾಗಿ, ಲೇಖಕಿಯರಲ್ಲೇ ವಿಶಿಷ್ಟ ಸಾಧನೆ ಮಾಡಿರುವ ಕಮಲಾ ಹಂಪನಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು, ಸಾಹಿತ್ಯಾಸಕ್ತ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಓಂ ಶಾಂತಿಃ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಾರ್ಥಿಸಿದ್ದಾರೆ.