ದಾವಣಗೆರೆ: ಬೆಣ್ಣೆನಗರಿಯಲ್ಲಿ ತರಕಾರಿ ಬೆಲೆ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಚಿಕನ್, ಮಟನ್ಗೆ ಕೊಡುವ ದರದಲ್ಲಿ ಗ್ರಾಹಕರು ತರಕಾರಿ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆಯಿಂದ ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಾರಾಟ ಡಲ್ ಆಗಿದೆ. ಮಳೆಯಿಲ್ಲದ ಕಾರಣ ಪ್ರತಿಯೊಂದರ ದರ ಹೆಚ್ಚಳವಾಗಿದ್ದು, ಮಧ್ಯಮವರ್ಗದ ಜನ ಹೈರಾಣಾಗಿದ್ದಾರೆ.
ಜನರಿಲ್ಲದೇ ತರಕಾರಿ ಮಾರುಕಟ್ಟೆ ಖಾಲಿ ಹೊಡೆಯುತ್ತಿದೆ. ಪರಿಣಾಮ, ತಂದ ತರಕಾರಿಗಳನ್ನು ತಿಪ್ಪೆಗೆ ಎಸೆಯುವ ಪರಿಸ್ಥಿತಿ ಎದುರಾಗಿದೆ ಎಂದು ತರಕಾರಿ ಮಾರಾಟಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಾರದೇ, ಫಸಲು ಇಲ್ಲದ ಹಿನ್ನೆಲೆ ಪ್ರತೀ ತರಕಾರಿ ದರ ಹೆಚ್ಚಾಗಿದೆ. ಇನ್ನೂ ಜಿಲ್ಲೆಯ ಹಳ್ಳಿಗಳಿಂದ ತರಕಾರಿ ಅಕ್ಕಪಕ್ಕದ ರಾಜ್ಯಗಳಿಗೆ ಹೋಗುತ್ತಿರುವುದರಿಂದಲೂ ಈ ಸಮಸ್ಯೆ ಆಗಿದೆ ಎಂದು ತರಕಾರಿ ಮಾರಾಟಗಾರರು ಆತಂಕ ವ್ಯಕ್ತಪಡಿಸಿದರು.
ತರಕಾರಿ ಮಾರಾಟಗಾರ ರಮೇಶ್ ನಾಯ್ಕ್ ಮಾತನಾಡಿ, ಮಳೆ ಇಲ್ಲದೇ ತರಕಾರಿ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರಿಗೆ ತರಕಾರಿ ಕೊಳ್ಳುವುದು ಕಷ್ಟವಾಗಿದೆ. ಜನ ಬರುತ್ತಿಲ್ಲ. ಹಾಕಿಸಿದ ತರಕಾರಿಯಲ್ಲಿ ಅರ್ಧದಷ್ಟು ಮಾರಾಟವಾಗುತ್ತಿದೆಯಷ್ಟೇ. ಗ್ರಾಹಕರು ಕೂಡ ಕಮ್ಮಿ ಬೆಲೆಗೆ ಕೇಳುತ್ತಾರೆಂದು ತಮ್ಮ ಸಮಸ್ಯೆ ಹೇಳಿಕೊಂಡರು.
ಇದನ್ನೂ ಓದಿ: ಮಹಾಲಕ್ಷ್ಮೀ ಯೋಜನೆ: ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು, ಹೈರಾಣಾಗುತ್ತಿರುವ POST OFFICE ಸಿಬ್ಬಂದಿ - Mahalakshmi Scheme
ತರಕಾರಿ ಬೆಲೆ ನೋಡುವುದಾದರೆ, ಬೀನ್ಸ್ ಕೆ.ಜಿಗೆ 200-250 ರೂಪಾಯಿ, ಟೊಮೆಟೊ 50-60 ರೂ., ಈರುಳ್ಳಿ 25-30 ರೂ., ಮೆಣಸಿನಕಾಯಿ 120 ರೂ., ಸೌತೆಕಾಯಿ 80 ರೂ., ಜವಳಿಕಾಯಿ 80 ರೂ., ನುಗ್ಗೇಕಾಯಿ 80 ರೂ., ಬೆಂಡೆಕಾಯಿ 60-80 ರೂ., ಬದನೆಕಾಯಿ 40 ರೂ., ಕ್ಯಾರೆಟ್ 80 ರೂಪಾಯಿ ಆಗಿದೆ. ಸೊಪ್ಪುಗಳ ದರ ಕೂಡ ಹೆಚ್ಚಳವಾಗಿದೆ. ಬೆಳಗಾವಿ, ಊಟಿ, ತಮಿಳುನಾಡು, ಆಂಧ್ರ, ಕೋಲಾರದಿಂದ ದಾವಣಗೆರೆಗೆ ತರಕಾರಿ ಬರುತ್ತದೆ. ವ್ಯಾಪಾರ ಸರಿ ಆಗ್ತಿಲ್ಲ. ಮಳೆ ಇಲ್ಲದ ಕಾರಣ ಬೆಳೆ ಬಾರದೇ ಈ ರೀತಿ ಏರಿಕೆಯಾಗಿದೆ. ಕಡಿಮೆ ವ್ಯಾಪಾರ ಆಗುತ್ತಿದೆಯೆಂದು ರಮೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿ ಯುವಕರ ಪುಂಡಾಟ - Miscreants Damaged Vehicles
ಗ್ರಾಹಕ ಹೇಳಿದಿಷ್ಟು: "80-100 ರೂಪಾಯಿಯಂತೆ ಎಲ್ಲ ತರಕಾರಿ ದರ ಏರಿಕೆಯಾಗಿದೆ. ದುಡಿಯುವ 400 ರೂಪಾಯಿಯಲ್ಲಿ ತರಕಾರಿಯೇ ನೂರಾರು ರೂಪಾಯಿ ಆದರೆ ತರಕಾರಿ ಕೊಳ್ಳುವುದು ಹೇಗೆ?. ಯಾವುದೇ ತರಕಾರಿ ಖರೀದಿಸಿದ್ರು ನೂರು ರೂಪಾಯಿ ಮೇಲಾಗುತ್ತದೆ. ಜೀವನ ಸಾಗಿಸೋದೇಗೆ?. 300 ರೂಪಾಯಿಗೆ ತರಕಾರಿ ತೆಗೆದುಕೊಡ್ರು ಚೀಲ ತುಂಬುತ್ತಿಲ್ಲ" ಎಂದು ಗ್ರಾಹಕ ಸಂತೋಷ್ ಬೇಸರ ವ್ಯಕ್ತಪಡಿಸಿದರು.