ಹುಬ್ಬಳ್ಳಿ: "ಮಹದಾಯಿ ಯೋಜನೆಯನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು" ಎಂದು ಕಳಸಾ-ಬಂಡೂರಿ ಹೋರಾಟಗಾರ ವೀರೇಶ ಸೊಬರದಮಠ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಲಪ್ರಭಾ ನದಿ ನೀರಿನಿಂದ ವಸೂಲಿ ಮಾಡಲಾದ ತೆರಿಗೆ ಹಣವನ್ನು ಮಲಪ್ರಭಾ ಅಚ್ಚುಕಟ್ಟಿನ ಜನರಿಗೆ ವಿತರಿಸಬೇಕು. ಈ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗುವುದು" ಎಂದರು.
"ಈಗಾಗಲೇ ಮಹದಾಯಿ ಯೋಜನೆ ಅನುಷ್ಠಾನಕ್ಕೆ ರೈತರು ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಮಾತ್ರ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೃಷಿಗಾಗಿ ಡ್ಯಾಂ ಕಟ್ಟಿದ್ದಾರೆ. ಡಿಪಿಆರ್‌ನಲ್ಲೂ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇದೀಗ ಮಲಪ್ರಭಾ ನೀರನ್ನು ಕುಡಿಯಲು ಬಿಡಲಾಗುತ್ತಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅದರಿಂದ ಬರುವ ತೆರಿಗೆಯನ್ನು ಅಚ್ಚಕಟ್ಟಿನ ಜನರಿಗೆ ಕೊಡಬೇಕು. ಈ ಬಗ್ಗೆ ಕಾನೂನು ಹೋರಾಟ ಮಾಡತ್ತೇವೆ" ಎಂದು ಹೇಳಿದರು.
"ಯೋಜನೆ ಅನುಷ್ಠಾನಗೊಳಿಸಲು ಅಡ್ಡಿಯಾಗಿರುವ ಟೈಗರ್ ಕಾರಿಡಾರ್ ಅನುಮತಿಗೆ ಕೇಂದ್ರ ಮತ್ತೆ ಅರ್ಜಿಯನ್ನು ರದ್ದುಗೊಳಿಸಿದೆ. ಕೇವಲ ಗೋವಾದ ಇಬ್ಬರು ಸಂಸದರು ಹೇಳಿದಂತೆ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯದ ಸಂಸದರು ಏನೂ ಮಾಡುತ್ತಿದ್ದಾರೆ. ರಾಜ್ಯದ ಜನರ ಪರವಾನಗಿ ಧ್ವನಿಯಾಗದ ಸಂಸದರು ರಾಜೀನಾಮೆ ನೀಡಬೇಕು. ಮಹದಾಯಿ ಯೋಜನೆ ಕುರಿತಂತೆ ರಾಜ್ಯದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲ ಮೋಹನ್ ಕಾತರಕಿ ಕೂಡಾ ಹಣ ಪಡೆದು ಜನರಿಗೆ ಮೋಸ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ಟಿಕೆಟ್ ಪಡೆಯಲು ದುಂಬಾಲು ಬಿದ್ದಿದ್ದಾರೆ. ಇದು ಖಂಡನೀಯ. ವಕೀಲರ ನಡೆ ಕುರಿತು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ದೆಹಲಿ ಚಲೋಗೆ ಹೊರಟಿದ್ದ ರಾಜ್ಯದ ನೂರಾರು ರೈತರನ್ನು ಭೋಪಾಲ್ನಲ್ಲಿ ವಶಕ್ಕೆ ಪಡೆದ ಪೊಲೀಸರು