ಮಂಗಳೂರು: ನಗರದ 13 ವರ್ಷದ ವರುಣ್ ಡಿ’ಕೋಸ್ಟಾ ಅವರು ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ 'ಮಿಸ್ಟರ್ ಟೀನ್ ಸೂಪರ್ ಗ್ಲೋಬ್' ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಈ ಸ್ಪರ್ಧೆ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್, ಮಾಡೆಲಿಂಗ್ ಹಾಗೂ ಪ್ರತಿಭಾ ಪ್ರದರ್ಶನಗಳ ಮೂಲಕ ಯಶಸ್ವಿಯಾಗಿ ನಡೆಯುತ್ತದೆ. ಈ ವರ್ಷ ಆಗಸ್ಟ್ 7ರಿಂದ 10ರ ವರೆಗೆ ಥಾಯ್ಲೆಂಡ್‌ನಲ್ಲಿ ಸ್ಪರ್ಧೆ ನಡೆದಿದ್ದು ಅಮೆರಿಕ, ಲೆಬನಾನ್, ಅರ್ಮೇನಿಯಾ, ಯುಎಇ, ಓಮನ್, ಥಾಯ್ಲೆಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ ಸೇರಿದಂತೆ 21 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.
ವರುಣ್ ಅವರ ವಿಜಯಯಾತ್ರೆ ಭಾರತದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಿಂದ ಆರಂಭವಾಗಿದೆ. 2024ರ ಮೇ ತಿಂಗಳಲ್ಲಿ ಕ್ಯಾಲಿಕಟ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಇವರು ಜಯಿಸಿದ್ದರು. ದೇಶಾದ್ಯಂತ ಸ್ಪರ್ಧಿಗಳೊಂದಿಗೆ ಕಠಿಣ ಸ್ಪರ್ಧೆಯಲ್ಲಿ ತೊಡಗಿ, ಅಂತಿಮವಾಗಿ ವಿಜೇತರಾಗಿ ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಅವಕಾಶ ಪಡೆದುಕೊಂಡಿದ್ದರು. ಇದೀಗ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಸ್ಪರ್ಧೆಯ 13ರಿಂದ 15 ವರ್ಷ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ವರುಣ್, ಪ್ರಸ್ತುತ ಮಂಗಳೂರು ಬಜ್ಪೆ ಸೇಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿದ್ದಾರೆ. ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ಜಾಹೀರಾತು ಶೂಟ್ಗಳಲ್ಲಿ ಭಾಗವಹಿಸುತ್ತಿದ್ದಾರೆ. ವರುಣ್ ಸಾಧನೆಗೆ ಪೋಷಕರಾದ ಲಿಡಿವಿನ್ ಡಿ'ಕೋಸ್ಟಾ ಮತ್ತು ವಿನ್ಸೆಂಟ್ ಡಿ'ಕೋಸ್ಟಾ ನಿರಂತರ ಬೆಂಬಲ ನೀಡಿದ್ದಾರೆ.
ವರುಣ್ ಗುಣಮಟ್ಟದ ತರಬೇತಿ ಪಡೆದಿದ್ದರು. ವಿಜೇ ಡಿಕ್ಷನ್, ಯಶಸ್ವಿನಿ ದೇವಾಡಿಗ, ಸುಧೀರ್ ಉಲ್ಲಾಲ್, ಪ್ರಮೋದ್ ಆಳ್ವಾ, ಕೌಶಿಕ್ ಸುವರ್ಣ, ಸುಮಿತ್, ಕಿಂಗ್ಸ್ ಡ್ಯಾನ್ಸ್ ಅಕಾಡೆಮಿಯ ಸುರೇಶ್ ಮುಕುಂದ್, ನೃತ್ಯ ಶಕ್ತಿಯ ಶಕ್ತಿ ಮೋಹನ್, ಬಿಗ್ ಡ್ಯಾನ್ಸ್ ಸೆಂಟರ್, ಸ್ಪಾಟ್ ಲೈಟ್ ಅಕಾಡೆಮಿ, ಟೆರೆನ್ಸ್ ಲೆವಿಸ್ ಡ್ಯಾನ್ಸ್ ಅಕಾಡೆಮಿ, ಸ್ವತಾ ಅರೇಹೋಳೆ, ಪ್ರಮೋದ್ ಆಳ್ವಾ, ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿಯ ನಿತಿನ್, ಓಷನ್ ಕಿಡ್ಸ್ನ ಚರಣ್, ಎನ್.ಪಿ.ಸ್ಟುಡಿಯೋದ ನಿಕ್ಕಿ ಪಿಂಟೋ, ಆರ್ಯನ್ ಸ್ಟುಡಿಯೋದ ನವೀನ್ ಆರ್ಯನ್, ಮುಂಬೈನ ಜೋರ್ಡನ್ ಮತ್ತು ಲವಾನ್ಸ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು. ಡಿಸೈನರ್ ಉಡುಪುಗಳನ್ನು ಹೇರಾ ಪಿಂಟೋ ಕೂಟ್ಟೂರ್ ವಿನ್ಯಾಸಗೊಳಿಸಿದ್ದರು.
ತಮ್ಮ ಸಾಧನೆಯ ಕುರಿತು ಮಾತನಾಡಿದ ವರುಣ್, "ಸ್ಪರ್ಧೆಯಲ್ಲಿ ಮೂರು ರೌಂಡ್ ಇತ್ತು. ನ್ಯಾಷನಲ್ ಕಾಸ್ಟ್ಯೂಮ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಸಂದರ್ಶನ ಮತ್ತು ಇಂಟರ್ಯಾಕ್ಷನ್ ರೌಂಡ್. ಇದರಲ್ಲಿ ಆಯ್ಕೆಯಾಗಿ ವಿಜೇತನಾಗಿರುವುದು ಖುಷಿ ತಂದಿದೆ" ಎಂದರು.
ತಾಯಿ ಲಿಡ್ವಿನ್ ಡಿ'ಕೋಸ್ಟಾ ಮಾತನಾಡಿ, "ನನ್ನ ಮಗ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಜಯಿಸಿರುವುದು ತುಂಬಾ ಸಂತಸವಾಗಿದೆ. ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮಗ ಸಾಧನೆ ಮಾಡಬೇಕೆಂಬ ಕನಸಿತ್ತು, ಅದು ಈಡೇರಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ತರಬೇತಿ ನೀಡಿದ ವಿಜೇ ಡಿಕ್ಷನ್ ಮಾತನಾಡಿ, "ಥಾಯ್ಲೆಂಡ್‌ಗೆ ಹೋಗಿ ಜಯಿಸಿ ಬಂದಿರುವುದು ಖುಷಿ ತಂದಿದೆ. ವರುಣ್ ಗೆಲ್ಲಬೇಕೆಂಬುದು ನನ್ನ ಕನಸಾಗಿತ್ತು. ಅರ್ಧ ವರ್ಷ ಶ್ರಮಪಟ್ಟಿದ್ದೇವೆ. ಅವರ ತಂದೆ ತಾಯಿ, ಕುಟುಂಬದ ಸಹಕಾರ ನೀಡಿ ಈ ಗೆಲುವು ಸಾಧ್ಯವಾಗಿದೆ. ಆತನಿಗೆ ನಟನಾಗಬೇಕೆಂಬ ಆಸೆಯಿದೆ" ಎಂದು ತಿಳಿಸಿದರು.