ಬೆಂಗಳೂರು: ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್ ಇನ್ನು ಆರು ತಿಂಗಳಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ನಗರದ ತಿಪ್ಪಸಂದ್ರದ ಬಿಇಎಂಎಲ್ ನಿರ್ವಾಹಕ ಗೇಟ್ ಪರಿಶೀಲಿಸಿ ಮಾತನಾಡಿದ ಅವರು, ವಂದೇ ಭಾರತ್, ಅಮೃತ ಭಾರತ್ ಹಾಗೂ ನಮೋ ಭಾರತ್ ರೈಲುಗಳು ಭಾರತೀಯ ರೈಲಿನ ಚಿತ್ರಣ ಬದಲಿಸಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ವಂದೇ ಭಾರತ್‌ನಲ್ಲಿ ಹತ್ತು ಸ್ಲೀಪರ್ ಕೋಚ್ ನಿರ್ಮಾಣವಾಗುತ್ತಿದ್ದು, ಇದರ ಪರೀಕ್ಷೆ ಆರು ತಿಂಗಳವರೆಗೆ ನಡೆಯಲಿದ್ದು, ಆ ಬಳಿಕ ಇನ್ನಷ್ಟು ಕೋಚ್ಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ವಿಶ್ವದಲ್ಲಿ ಇಂತಹ ಕಾಮಗಾರಿಗಳಿಗೆ ಆರು ವರ್ಷಗಳು ಹಿಡಿಯುತ್ತದೆ, ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕಡಿಮೆ ಸಮಯದಲ್ಲಿ ಹೆಚ್ಚು ಕಾರ್ಯಕ್ಕೆ ಒತ್ತು ನೀಡುತ್ತಾರೆ. ಹಾಗಾಗಿ ಶೀಘ್ರದಲ್ಲಿಯೇ ರೈಲು ಸಂಚಾರ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಆರಂಭ; ನಿಲುಗಡೆ ವಿವರ, ಟಿಕೆಟ್ ಮಾಹಿತಿ ಹೀಗಿದೆ
ಅತ್ಯುತ್ತಮ ದರ್ಜೆಯ ಒಳಾಂಗಣ, ವಿಶಿಷ್ಟ ಚೇತನರಿಗಾಗಿ ಬೇರೆ ಶೌಚಾಲಯ, ಸ್ವಯಂಚಾಲಿತ ಪ್ರಯಾಣಿಕ ಬಾಗಿಲು, ಆಂತರಿಕ ಸಂವಹನ ಬಾಗಿಲು, ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ, ಚಾಲಕ ಸಿಬ್ಬಂದಿಗೆ ಶೌಚಾಲಯ, ಬಿಸಿ ನೀರಿನಲ್ಲಿ ಸ್ನಾನ ಮಾಡುವ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ಸೇರಿದಂತೆ ಹಲವು ಸೌಲಭ್ಯಗಳು ಮುಂದಿನ ದಿನಗಳಲ್ಲಿ ರೈಲ್ವೆ ಪ್ರಯಾಣಿಕರಿಗೆ ಸಿಗಲಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಶಂತನು ರಾಯ್ ಮಾತನಾಡಿ, ವಂದೇ ಭಾರತ್ ಸ್ಲೀಪರ್ ಕೋಚ್ ಪ್ರಯಾಣದ ಸಮಯವನ್ನು ಕಡಿಮೆ ಮಾಡಿ, ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಮೈಲಿಗಲ್ಲನ್ನು ತಲುಪುವುದಕ್ಕೆ ಸಂತೋಷಪಡುತ್ತೇವೆ ಎಂದರು.
ನಮ್ಮ ಉತ್ಪಾದನೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ, ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಯಾಣಿಕರ ಸೌಕರ್ಯ ಮತ್ತು ಅನುಕೂಲತೆಯಲ್ಲಿ ಹೊಸ ಮಾನದಂಡವನ್ನು ಹೊಂದಲಿದೆ ಎಂದು ಹೇಳಿದರು.
ಇದನ್ನೂ ಓದಿ: ತಿರುವನಂತಪುರ ಕಾಸರಗೋಡು ವಂದೇ ಭಾರತ್ ಎಕ್ಸ್ಪ್ರೆಸ್ ಮಂಗಳೂರುವರೆಗೆ ವಿಸ್ತರಣೆ