ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 94.73 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ಆಗಿರುವ ದೀಪಾ.ಡಿ ಅವರ ಮನೆಯನ್ನ ಸಿಬಿಐ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಇತ್ತ ಇ.ಡಿ. ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಅವರ ಆಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಹುಕೋಟಿ ವಂಚನೆ ಸಂಬಂಧ ರಾಜ್ಯ ಎಸ್ಐಟಿ ತಂಡವು ತನಿಖೆ ನಡೆಸಿ 11 ಮಂದಿಯನ್ನ ಬಂಧಿಸಿ 30 ಕೋಟಿ ರೂಪಾಯಿಗಿಂತ ಹೆಚ್ಚು ಹಣ ವಶಕ್ಕೆ ಪಡೆದುಕೊಂಡಿದೆ. ಮತ್ತೊಂದೆಡೆ ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ವಾಲ್ಮೀಕಿ ಆಭಿವೃದ್ಧಿ ನಿಗಮಕ್ಕೆ ಸೇರಿದ ಬಹುಕೋಟಿ ದುರ್ಬಳಕೆ ಸಂಬಂಧ ಬ್ಯಾಂಕ್ ಅಧಿಕಾರಿಗಳೇ ಹಗರಣದಲ್ಲಿ ಶಾಮೀಲಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಸಿಬಿಐ, ಇ.ಡಿ.ಗೂ ಪತ್ರ ಬರೆದಿತ್ತು. ಕಳೆದ ಮೂರು ದಿನಗಳ ಹಿಂದೆ ಹಣದ ವಹಿವಾಟಿನ ಬಗ್ಗೆ ಇ.ಡಿ. ಅಧಿಕಾರಿಗಳು ಎಂ.ಜಿ. ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಗೆ ಬಂದು ಪರಿಶೀಲಿಸಿದ್ದರು. ಹಗರಣದಲ್ಲಿ ಬ್ಯಾಂಕ್ನ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ದೀಪಾ ಅವರ ಕೈವಾಡ ಇರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವಿಜಯನಗರದಲ್ಲಿರುವ ಆಕೆಯ ಮನೆಗೆ ಹೋಗಿದ್ದಾಗ ದೀಪಾ ನಾಪತ್ತೆ ಆಗಿರುವುದು ಗೊತ್ತಾಗಿತ್ತು. ಹೀಗಾಗಿ ಅವರ ಮನೆಯನ್ನ ಸೀಲ್ ಮಾಡಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಮನೆಗೆ ನೋಟಿಸ್ ಅಂಟಿಸಿದ ಸಿಬಿಐ: ಬ್ಯಾಂಕ್ನಲ್ಲಿ ನಡೆದ ಬಹುಕೋಟಿ ಅವ್ಯವಹಾರದಲ್ಲಿ ಬ್ಯಾಂಕ್ನ ಮಹಿಳಾ ಅಧಿಕಾರಿ ಪಾತ್ರ ಕಂಡು ಬರುತ್ತಿದ್ದಂತೆ ಸಿಬಿಐ ದಾಳಿ ಮಾಡಿತ್ತು. ದಾಳಿ ಸಂದರ್ಭದಲ್ಲಿ ಆರೋಪಿತೆ ಮನೆಯಲ್ಲಿ ಇಲ್ಲದಿರುವುದು ಗೊತ್ತಾಗಿದೆ. ಹೀಗಾಗಿ ಮನೆಯನ್ನ ಸೀಲ್ ಮಾಡಿರುವ ಅಧಿಕಾರಿಗಳು 'ವಂಚನೆ ಪ್ರಕರಣ ತನಿಖಾ ಹಂತದಲ್ಲಿದ್ದು ಅನುಮತಿಯಿಲ್ಲದೇ ಮನೆಯೊಳಗೆ ಪ್ರವೇಶಿಸುವಂತಿಲ್ಲ' ಎಂದು ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.
ನಾಗೇಂದ್ರ ಆಪ್ತ ಹರೀಶ್ ವಶಕ್ಕೆ: ಇತ್ತ ಇ.ಡಿ. ಅಧಿಕಾರಿಗಳು ಕೂಡ ತನಿಖೆ ಚುರುಕುಗೊಳಿಸಿದ್ದು, ಮಾಜಿ ಸಚಿವ ನಾಗೇಂದ್ರಗೆ ಸೇರಿದ ಡಾರ್ಲಸ್ ಕಾಲೋನಿಯಲ್ಲಿನ ಮನೆಯಲ್ಲಿ ಆರು ಗಂಟೆಗೂ ಹೆಚ್ಚು ಸಮಯದಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ನಾಗೇಂದ್ರ ಆಪ್ತ ಹರೀಶ್ ಎಂಬುವರನ್ನು ವಶಕ್ಕೆ ಪಡೆದು ಶಾಂತಿನಗರದಲ್ಲಿರುವ ಇ.ಡಿ. ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ನಿಗಮದ ಮಾಜಿ ವ್ಯವಸ್ಥಾಪಕ ಹಾಗೂ ಎಸ್ಐಟಿ ಬಂಧನದಲ್ಲಿರುವ ಪದ್ಮನಾಭ್, ಮತ್ತೋರ್ವ ಆರೋಪಿ ಸತ್ಯನಾರಾಯಣ ವರ್ಮಾನಿಂದ ಹಣ ಪಡೆದು ಹರೀಶ್ಗೆ ಸುಮಾರು 25 ಲಕ್ಷ ರೂಪಾಯಿ ನೀಡಿದ್ದ ಎನ್ನಲಾಗಿದೆ. ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಪಿಎಗೂ ಹಣ ಕಳುಹಿಸಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಗರಣಗಳ ವಿರುದ್ಧ ಉಭಯ ಸದನಗಳಲ್ಲಿ ಹೋರಾಟ: ಬಿಜೆಪಿ ನಿರ್ಧಾರ - BJP Leaders Meeting