ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್, ತನ್ನ ಸ್ನೇಹಿತನ ಮನೆಯಲ್ಲಿಟ್ಟಿದ್ದ 3.62 ಕೋಟಿ ರೂಪಾಯಿಯನ್ನು ಎಸ್ಐಟಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಕಳೆದ ಜೂ.13ರಂದು ನೆಲಮಂಗಲದ ಗೋವಿನಹಳ್ಳಿ ಸ್ನೇಹಿತನೊಬ್ಬರ ಮನೆಯಲ್ಲಿ ಇಟ್ಟಿದ್ದ 3.62 ಕೋಟಿ ಹಣವನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಪ್ರಕರಣದ ಆರೋಪಿಯಾಗಿರುವ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ನ ಎಂಡಿ ಸತ್ಯನಾರಾಯಣವರ್ಮಾ ವಿವಿಧ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದರು. ಇದೇ ಹಣವನ್ನು ಆರೋಪಿತರಿಗೆ ಆರ್ಟಿಜಿಎಸ್, ನೆಟ್ ಬ್ಯಾಂಕಿಂಗ್ ಹಾಗೂ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು. ಇದೇ ರೀತಿ ಪದ್ಮನಾಭ ಅವರಿಗೂ ಹಣವನ್ನ ವರ್ಮಾ ಕಳುಹಿಸಿದ್ದರು ಎಂದು ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಿದ್ದಾರೆ.
ದದ್ದಲ್ ಆಪ್ತ ಸಹಾಯಕನಿಗೂ ತಲುಪಿತ್ತು 55 ಲಕ್ಷ: ಕಳೆದ ಮಾರ್ಚ್ ಮೊದಲ ವಾರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಆಪ್ತ ಸಹಾಯಕ ಪಂಪಣ್ಣಗೆ 5 ಲಕ್ಷ ಸಂದಾಯವಾಗಿತ್ತು. ಏಪ್ರಿಲ್ 24 ರಂದು ಬಿ.ನಾಗೇಂದ್ರ ಆಪ್ತ ಸಹಾಯಕ ಹರೀಶ್ 25 ಲಕ್ಷ ಹಾಗೂ ಇದೇ ತಿಂಗಳಲ್ಲಿ ಪಂಪಣ್ಣ ಮತ್ತೆ 50 ಲಕ್ಷ ಮತ್ತು ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ದುರುಗಣ್ಣ ಪಡೆದುಕೊಂಡಿದ್ದ 25 ಲಕ್ಷ ಹಣ ಬಗ್ಗೆ ಮರೆಮಾಚಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ರಿಮ್ಯಾಂಡ್ ಅರ್ಜಿಯಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.