ಬೆಂಗಳೂರು : ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅವ್ಯವಹಾರ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ನಾಗೇಂದ್ರ ಅವರಿಗೆ ಚಿಕಿತ್ಸೆ ಕೊಡಿಸುವುದು ಮತ್ತು ವಕೀಲರೊಂದಿಗೆ ಚರ್ಚಿಸಲು ಖಾಸಗಿಯಾಗಿ ಸ್ಥಳಾವಕಾಶ ಒದಗಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜುಲೈ 18ಕ್ಕೆ ಮುಂದೂಡಿದೆ.
ವಕೀಲರೊಂದಿಗೆ ಚರ್ಚೆ ನಡೆಸಲು ಖಾಸಗಿ ಸ್ಥಳಾವಕಾಶ ವ್ಯವಸ್ಥೆ ಮಾಡಬೇಕು. ಈಗಾಗಲೇ ಸ್ಟಂಟ್ ಹಾಕಿಸಿದ್ದು, ಸರಿಯಾದ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ವಿಚಾರಣೆ ವೇಳೆ ಅಧಿಕಾರಿಗಳು ಹೇಳಿದಂತೆ ಮಾಹಿತಿ ನೀಡಬೇಕು ಎಂಬುದಾಗಿ ಒತ್ತಡ ಹಾಕದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇಡಿ ವಶದಲ್ಲಿದ್ದ ಆರೋಪಿಯನ್ನು ಹೇಳಿಕೆ ದಾಖಲಿಸುವ ಹಕ್ಕು ಪೊಲೀಸರಿಗೆ ಇದೆ. ಆದರೆ, ಈ ರೀತಿ ಹೇಳಿಕೆ ದಾಖಲಿಸುವಾಗ ಒತ್ತಡ ಹಾಕಬಾರದು ಎಂದು ತಿಳಿಸಲಾಗಿದೆ. ಸಾಕ್ಷಿ ದಾಖಲಿಸುವಾಗ, ಸಾಕ್ಷಿ ಕಲೆ ಹಾಕುವಾಗ ಒತ್ತಡ ಹಾಕುವಂತಿಲ್ಲ ಎಂಬುದಾಗಿ ಬಾಂಬೆ ಹೈಕೋರ್ಟ್ ಆದೇಶವೊಂದರಲ್ಲಿ ತಿಳಿಸಿದೆ. ಅಲ್ಲದೇ, ವಿಚಾರಣೆ ನಡೆಸುವ ಸಂದರ್ಭದಲ್ಲಿಯೂ ವಕೀಲರ ಭೇಟಿ ಮಾಡಿ ಮಾಹಿತಿ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ವಕೀಲರು ಇಡಿ ವಶದಲ್ಲಿರುವ ನಾಗೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಕದಲ್ಲಿ ಬಂದು ನಿಲ್ಲುತ್ತಾರೆ. ನ್ಯಾಯಾಲಯದ ಆದೇಶ ತಂದಲ್ಲಿ ಮಾತ್ರ ಖಾಸಗಿಯಾಗಿ ಚರ್ಚೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ ಎಂದು ವಕೀಲರು ಮಾಹಿತಿ ನೀಡಿದರು.
ಏನೇ ಮಾತನಾಡಿದರೂ ನಮ್ಮ ಮುಂದೆಯೇ ಮಾತನಾಡಬೇಕು ಎಂದು ಹೇಳುತ್ತಾರೆ. ತನಿಖೆಯ ವೇಳೆ ಅರ್ಜಿದಾರರಿಗೆ ಬೆದರಿಕೆ ಹಾಕಿದಲ್ಲಿ ವಕೀಲರೊಂದಿಗೆ ಚರ್ಚೆ ನಡೆಸುವುದಾದರೂ ಹೇಗೆ?. ಅಧಿಕಾರಿ ಪಕ್ಕದಲ್ಲಿ ಇದ್ದರೆ ಧೈರ್ಯ ಬರಲು ಸಾಧ್ಯವೇ?. ಇದು ಎಷ್ಟರ ಮಟ್ಟಿಗೆ ಸರಿ ಎಂದು ವಾದ ಮಂಡಿಸಿದರು. ಅಲ್ಲದೇ, ಅರ್ಜಿದಾರರಿಂದ ವಶಕ್ಕೆ ಪಡಿಸಿಕೊಂಡಿರುವ ಮೊಬೈಲ್ ಅನ್ನು ಮಿರರ್ ಇಮ್ಯೇಜ್ ಮಾಡುವುದಕ್ಕೆ ಅವಕಾಶ ನೀಡಬಾರದು. ಚುನಾವಣೆಯ ವೇಳೆ ನಮ್ಮ ಕಕ್ಷಿದಾರರ ವಿಚಾರಗಳು ಬಹಿರಂಗವಾಗಲಿದೆ. ತನಿಖೆಯ ಎಲ್ಲಾ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಫೋನ್ನಲ್ಲಿ ಅನೇಕ ಖಾಸಗಿ ವಿಚಾರ ಇರುತ್ತವೆ. ಕೆನಡಿಯನ್ ಸುಪ್ರೀಂಕೋರ್ಟ್ ಹೇಳತ್ತೆ, ಕೋರ್ಟ್ ಅನುಮತಿ ಇಲ್ಲದೇ ಫೋನ್ ಬಳಕೆ ಮಾಡಬಾರದು. ಬಳಕೆ ಮಾಡಿದರೂ ಅದು ಕೋರ್ಟ್ ಮಾನಿಟರಿಂಗ್ ಅಡಿ ಮಾಡಬೇಕು. ತನಿಖಾಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಮುಂದೆ ಬಂದಿದ್ದೇವೆ. ಅವರ ಕೆಲಸ ಮಾಡಿದ್ದರೆ ನಾವು ಬರ್ತಾ ಇರಲಿಲ್ಲ ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ತನಿಖೆ ಹೇಗೆ ನಡೆಸಬೇಕು ಎನ್ನುವುದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದಾಗಿದೆ. ಈ ಸಂಬಂಧ ನಿರ್ದೇಶನ ನೀಡಲು ಸಾಧ್ಯವೇ ಎಂದು ನಾಗೇಂದ್ರ ಪರ ವಕೀಲರಿಗೆ ಪ್ರಶ್ನಿಸಿದರು.
ಇದಕ್ಕೆ ಇಡಿ ಪರ ವಾದ ಮಂಡಿಸಿದ ಪ್ರಸನ್ನ ಕುಮಾರ್ ಅವರಿಂದ ಆಕ್ಷೇಪ ವ್ಯಕ್ತವಾಯಿತು. ಅರ್ಜಿದಾರರ ಪರ ವಕೀಲರ ಆಧಾರ ರಹಿತವಾಗಿ ಏನನ್ನೂ ಹೇಳಬಾರದು. ಕಾನೂನಿನಲ್ಲಿ ಇರುವ ಅಂಶಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಸ್ಪಷ್ಟವಾಗಿ ತಿಳಿಸಿ ವಾದ ಮಂಡಿಸಬೇಕು. ಆರೋಪಿ ವಿಡಿಯೋ ಗ್ರಾಫ್ಗೆ ರೆಡಿ ಇದ್ದರೂ ಮಾಡಲು ಅವಕಾಶ ಇಲ್ಲ. ಆರೋಪಿ ಲಾಭದ ರೀತಿಯಲ್ಲಿ ಪ್ರಾಸಿಕ್ಯೂಷನ್ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಆರೋಪಿಯೊಂದಿಗೆ ಚರ್ಚೆ ನಡೆಸಲು ವಕೀಲ ಫೋನ್ ಒಳಗೆ ಅವಕಾಶ ನೀಡಲು ಸಾಧ್ಯವಿಲ್ಲ. ತನಿಖೆಯ ಹಂತದಲ್ಲಿದ್ದಾಗ ಫೋನ್ ಬಿಡುಗಡೆಗೆ ಅವಕಾಶ ಇಲ್ಲ. ಪ್ರಕರಣದಲ್ಲಿ ಪರಿಣಾಮಕಾರಿ ವಿಚಾರಣೆಗೆ ಕಷ್ಟ ಸಾಧ್ಯವಾಗಿದೆ ಎಂದು ವಿವರಿಸಿದರು.
ಓದಿ: ಚಾಮರಾಜನಗರ: ಬೈಕ್ ಕದಿಯುತ್ತಿದ್ದ ಸಹೋದರರ ಬಂಧನ, 4 ಬೈಕ್ ವಶಕ್ಕೆ - Arrest of bike thieves