ಕಾರವಾರ: ಜಿಲ್ಲೆಯಲ್ಲಿ ಆರ್ದ್ರಾ ಮಳೆ ಅಬ್ಬರ ಜೋರಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೆಲವೆಡೆ ಗುಡ್ಡ ಕುಸಿತವಾಗಿದೆ. ಕಾರವಾರದ ದೇವಭಾಗ ಬಳಿ ಕಡಲಕೊರೆತಕ್ಕೆ ನೂರಾರು ಗಿಡಗಳು ಧರೆಗುರುಳಿ ಬೀಚ್ ರೇಸಾರ್ಟ್ನ 4 ಕಾಟೇಜ್‌ಗಳು ಸಂಪೂರ್ಣವಾಗಿ ಹಾನಿಯಾಗಿವೆ.
ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿದು ಸಾಧಾರಣ ಮಳೆಯಾಗಿದೆ. ಆದರೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಕರಾವಳಿ ತೀರಗಳಲ್ಲಿ ಇದೀಗ ಕಡಲಕೊರೆತದ ಭೀತಿ ಶುರುವಾಗಿದೆ. ಕಾರವಾರದ ದೇವಭಾಗ್ ಬೀಚ್ ರೇಸಾರ್ಟ್ ಬಳಿ ಕಳೆದ ಮೂರು ದಿನಗಳಿಂದ ಅಲೆಗಳ ಆರ್ಭಟದಿಂದಾಗಿ ಕಡಲ ಕೊರೆತ ಉಂಟಾಗಿದ್ದು, ಇಲ್ಲಿನ ಬೀಚ್ ರೇಸಾರ್ಟ್ ಪ್ರದೇಶದಲ್ಲಿ ನೆಡಲಾಗಿದ್ದ ನೂರಾರು ಗಾಳಿ ಗಿಡಗಳು ಬುಡಮೇಲಾಗಿವೆ.
ಮಾತ್ರವಲ್ಲದೇ ರೆಸಾರ್ಟ್ನ ನಾಲ್ಕು ಕಾಟೇಜ್‌ಗಳಿಗೆ ಹಾನಿಯಾಗಿದ್ದು, ಈ ಪೈಕಿ ಮೂರು ಕಾಟೇಜ್‌ಗಳು ಸಂಪೂರ್ಣ ನೆಲಸಮಗೊಂಡಿವೆ. ಮಾತ್ರವಲ್ಲದೇ ಕಳೆದ ಕೆಲ ವರ್ಷಗಳ ಹಿಂದೆ ನೆಟ್ಟಿದ್ದ ಬೃಹತ್ ಗಾತ್ರದ ಮರಗಳು ಕೂಡ ಉರುಳಿ ಬಿದ್ದಿವೆ. ಮಳೆಗಾಲದಲ್ಲಿ ರೇಸಾರ್ಟ್ಗೆ ಆಗಮಿಸುವವರ ಸಂಖ್ಯೆ ಕಡಿಮೆ. ಇದರಿಂದ ಪ್ರತಿ ಬಾರಿ ಒಂದು ಬದಿ ಮಾತ್ರ ಕಾಟೇಜ್‌ಗಳನ್ನು ನೀಡಲಾಗುತ್ತದೆ. ಇದೀಗ ಹಾನಿಯಾಗಿರುವ ಕಾಟೇಜ್‌ಗೆ ಯಾರಿಗೂ ನೀಡುತ್ತಿರಲಿಲ್ಲ.
ಕಳೆದ ಮೂರು ದಿನದಿಂದ ಅಲೆ ಜೋರಾಗಿ ಬರುತ್ತಿರುವ ಕಾರಣ ಕಡಲ ಕೊರೆತವಾಗಿದೆ. ಈ ಭಾಗದಲ್ಲಿ ಅಲೆ ತಡೆಗೋಡೆ ಇಲ್ಲದಿರುವುದೇ ಇದಕ್ಕೆ ಕಾರಣ. ಬಂದರು ಇಲಾಖೆಯಿಂದ ಕಳೆದ ಬಾರಿ 500 ಮೀಟರ್ ತಡೆಗೋಡೆ ನಿರ್ಮಾಣಕ್ಕೆ ಸುಮಾರು 7.5 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಇವರೆಗೂ ಬಂದಿಲ್ಲ.
ಮುಂದಿನ ದಿನಗಳಲ್ಲಿ ತಡೆಗೋಡೆ ನಿರ್ಮಾಣ ಮಾಡದೇ ಇದ್ದಲ್ಲಿ ಅಲೆಗೆ ಇನ್ನಷ್ಟು ಕಡಲತೀರ ಕೊಚ್ಚಿ ಹೋಗುವ ಬಗ್ಗೆ ಇಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ ಬುಧವಾರ ತಡರಾತ್ರಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರರಲ್ಲಿ ಗುಡ್ಡ ಕುಸಿದು ಭಾರಿ ಗಾತ್ರದ ಬಂಡೆಗಲ್ಲು ಹೆದ್ದಾರಿಗೆ ಉರುಳಿಬಿದ್ದಿತ್ತು. ಇದರಿಂದ ಕೆಲ ಕಾಲ ಸಂಚಾರ ಅಸ್ತವ್ಯವಸ್ಥಗೊಂಡಿತ್ತು. ರಾತ್ರಿಯೇ ಹೆದ್ದಾರಿ ಎರಡು ಬದಿ ಸೂಚನಾ ಫಲಕ ಅಳವಡಿಸಿ ಮುನ್ನೆಚ್ಚರಿಕಾ ಕ್ರಮವಹಿಸಿ ಮುಂಜಾನೆ ಹೆದ್ದಾರಿಯಲ್ಲಿ ಬಿದ್ದಿದ್ದ ಮಣ್ಣನ್ನು ಜೆಸಿಬಿಗಳ ಮೂಲಕ ತೆರವು ಮಾಡಲಾಯಿತು.
ಇನ್ನು ಸಿದ್ದಾಪುರದ ಹಸ್ವಿಗುಳಿಯ ವೆಂಕಟರಮಣ, ಸದಾನಂದ, ಪಾರ್ವತಿ ನಾಯ್ಕ ಎಂಬುವವರ ಮನೆಯ ಹಿಂಭಾಗದ ಬೃಹತ್ ಗುಡ್ಡವೊಂದು ಕುಸಿದಿದೆ. ಇದಲ್ಲದೆ ಶಿರಸಿ ಟಿಪ್ಪು ನಗರದಲ್ಲಿಯೂ ಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮಳೆ ಬಿದ್ದ ಕಾರಣ ಮನೆ, ಬೈಕ್ ಹಾಗೂ 8ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮನೆಯಲ್ಲಿರುವಾಗಲೇ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಜಿಲ್ಲೆಯಲ್ಲಿ ಹವಮಾನ ಇಲಾಖೆ ಗುರುವಾರ ಮುಂಜಾನೆ ವರದಿಯಂತೆ ಅಂಕೋಲಾದಲ್ಲಿ 49.6 ಮಿ.ಮೀ, ಭಟ್ಕಳದಲ್ಲಿ 123, ಹಳಿಯಾಳ 6.1, ಹೊನ್ನಾವರ 122.5, ಕಾರವಾರ 33.2, ಕುಮಟಾ 66.6, ಮುಂಡಗೋಡ 11.4, ಸಿದ್ದಾಪುರ 55.1, ಶಿರಸಿ 42.6, ಸೂಪಾ 25, ಯಲ್ಲಾಪುರ 25.2, ದಾಂಡೇಲಿ 10.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 43.2 ಮಿ.ಮೀ ಮಳೆಯಾಗಿದೆ.