ಭಟ್ಕಳ(ಉತ್ತರಕನ್ನಡ): ಶಂಕಿತ ಉಗ್ರನೊಂದಿಗೆ ಸಂಪರ್ಕದಲ್ಲಿದ್ದ ಭಟ್ಕಳ ಮಹಿಳೆಯನ್ನು ಖಚಿತ ಮಾಹಿತಿ ಮೇರೆಗೆ ಮುಂಬೈನ ಎಟಿಎಸ್ ತಂಡವು ಇಂದು ವಿಚಾರಣೆ ನಡೆಸಿದೆ. ಶಂಕಿತ ಉಗ್ರ ಹುಜೈಫ್ ಅಬ್ದುಲ್ ಅಜೀಜ್ ಶೇಖ್ ಎಂಬುವನು ಭಟ್ಕಳಕ್ಕೆ ಜನವರಿ 17 ರಂದು ಜಾಲಿಯ ಆಜಾದ್ ನಗರದ ಮಹಿಳೆ ಜೊತೆಗೆ ಸಂಪರ್ಕದಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದ ಮುಂಬೈನ ಎಟಿಎಸ್ ತಂಡದ ಪೊಲೀಸ್ ಅಧಿಕಾರಿಗಳು ಭಟ್ಕಳದ ಮಹಿಳೆ ವಿಚಾರಣೆ ನಡೆಸಿದ್ದಾರೆ.
ಈಕೆಯ ಮನೆಗೆ ತೆರಳಿದ ಎಟಿಎಸ್ ತಂಡದ ಐದು ಅಧಿಕಾರಿಗಳು, ಶಂಕಿತ ಉಗ್ರ ಅಜೀಜ್ ಶೇಖ್ ಅವರೊಂದಿಗಿನ ಸಂಬಂಧ ಹಾಗೂ ಸಂಪರ್ಕದ ಇರುವ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಪರಿಶೀಲನೆ ವೇಳೆ ಮಹಿಳೆಯು ಎಟಿಎಸ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾಳೆ ಎಂದು ಮೂಲಗಳಿಂದ ಲಭ್ಯವಾಗಿದೆ.
ಹುಜೈಪ್ ಅಬ್ದುಲ್ ಅಜೀಜ್ ಶೇಖ್ ಎಂಬ ಶಂಕಿತ ಉಗ್ರನನ್ನು ಜನವರಿ 23 ರಂದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಬಂಧಿಸಿದ ವೇಳೆ, ಆತನ ಜೊತೆ ಸಂಪರ್ಕದಲ್ಲಿರುವವರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭಟ್ಕಳದ ಮಹಿಳೆಯೊಂದಿಗೆ ಸದ್ಯ ಆತ ಸಂಪರ್ಕದಲ್ಲಿರುವುದು ತಿಳಿದು ಬಂದಿದ್ದು, ಈ ಮಾಹಿತಿಯನ್ನು ಆಧರಿಸಿ, ಎಟಿಎಸ್ ತಂಡದ ಅಧಿಕಾರಿಗಳು ಭಟ್ಕಳಕ್ಕೆ ಆಗಮಿಸಿ ವಿಚಾರಣೆ ಮಾಡಿದ್ದಾರೆ.
ವಿಚಾರಣೆ ನಡೆಸಿದ ವೇಳೆ ಮಹಿಳೆ ಆನ್ಲೈನ್ನಲ್ಲಿ ಅರೇಬಿಕ್ ಭಾಷೆ ಪಾಠ ಬೋಧಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಗಂಡ ಯಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದರಿಂದ ಈ ಮಹಿಳೆ ಗಂಡ ಮೃತಪಟ್ಟ ನಂತರ ತಂದೆ ತಾಯಿಯೊಂದಿಗೆ ವಾಸವಾಗಿದ್ದಾಳೆ. ಶಂಕಿತ ಉಗ್ರನ ಜೊತೆಗೆ ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಇಬ್ಬರಲ್ಲಿಯು ಸ್ನೇಹ ಬೆಳೆದು ನಿಕಟ ಸಂಪರ್ಕ ಹೊಂದಿರುವ ಬಗ್ಗೆ ತಿಳಿದು ಬಂದಿದೆ. ಮಹಿಳೆ ಉಗ್ರನಿಗೆ ತನ್ನ ಬ್ಯಾಂಕ್ ಖಾತೆಯಿಂದ ಆಗಾಗ್ಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ತಿಳಿಸಿದ್ದು, ಅವರಿಗೆ ಒಟ್ಟು 5 ಲಕ್ಷ ರೂಪಾಯಿ ಶಂಕಿತ ಉಗ್ರನ ಖಾತೆಗೆ ವರ್ಗಾವಣೆ ಮಾಡಿರುವ ಬಗ್ಗೆ ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.
ಇನ್ನು ಶಂಕಿತ ಉಗ್ರ ಅಜೀಜ್ ಶೇಖ್ ಭಟ್ಕಳಕ್ಕೆ ಜನವರಿಗೆ 17 ರಂದು ಬಂದಿದ್ದು, ತಾಲೂಕಿನ ಖಾಸಗಿ ಲಾಡ್ಜ್ವೊಂದರಲ್ಲಿ ಒಂದು ದಿನ ಉಳಿದು ಹೋದ ಕುರಿತು ಮತ್ತು ಮಹಿಳೆಯು ಆತನೊಂದಿಗೆ ಉಳಿದಿದ್ದ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಇದನ್ನೂಓದಿ:ಬೆಂಗಳೂರು: ಪ್ರಿ-ಸ್ಕೂಲ್ 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಹೆಣ್ಣು ಮಗು ಸಾವು