ಮಂಗಳೂರು: ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯು 'ಬಸ್ಸಿಗೆ ಕಲ್ಲು ತೂರಾಟ'ದ ಕೋಲಾಹಲದಲ್ಲಿಯೇ ಅಂತ್ಯಗೊಂಡಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅಧಿಕಾರಾವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸಂಗ ನಡೆದಿದೆ. ಮೇಯರ್ ಅವರು ಹಿಂದಿನ ಸಭೆಯ ನಡಾವಳಿ ಮಂಡಿಸುವಾಗಲೇ ತಮಗೆ ಮಾತನಾಡಲು ಅವಕಾಶ ಕೊಡಬೇಕೆಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು. ಆದರೆ, ಮೇಯರ್ ಅವಕಾಶ ಕೊಡದೆ ನಡಾವಳಿ ಮಂಡಿಸಿದರು.
ನಡಾವಳಿ ಮಂಡನೆ ಮುಗಿದ ತಕ್ಷಣ ಬಿಜೆಪಿ ಸದಸ್ಯೆ ಸಂಗೀತಾ ಮಾತನಾಡಿ, 'ರಾಜ್ಯಪಾಲರ ವಿರುದ್ಧದ ಪ್ರತಿಭಟನೆ ವೇಳೆ ಅಲ್ಪಸಂಖ್ಯಾತರಿಗೆ ಸೇರಿದ್ದ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಬಸ್‌ನಲ್ಲಿದ್ದ ಅಲ್ಪಸಂಖ್ಯಾತ ಮಹಿಳೆಯೂ ಕಲ್ಲು ತಾಗಿ ಗಾಯಗೊಂಡಿದ್ದಾರೆ' ಎಂದು ಆರೋಪಿಸಿದರು. ಈ ವೇಳೆ ಮೇಯರ್ ಮಾತನಾಡಿದ ತಕ್ಷಣ ವಿಪಕ್ಷ ನಾಯಕನಿಗೆ ಮಾತನಾಡಲು ಅವಕಾಶ ಕೊಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಆಗ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿಯವರು ಮಾತನಾಡಿ, ಇತ್ತೀಚೆಗೆ ಮಂಗಳೂರಿನಲ್ಲಿ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದಿತ್ತು. ಮನಪಾ ನಾಮನಿರ್ದೇಶಿತ ಸದಸ್ಯರೊಬ್ಬರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದರು. ಇಂದು ಮನಪಾ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು, ಅವರನ್ನು ಮಾರ್ಷಲ್ ಮೂಲಕ ಸದನದಿಂದ ಹೊರಗಡೆ ಹಾಕಬೇಕೆಂದು ಮೇಯರ್ ಅವರನ್ನು ಕೋರಿದರು.
ಈ ವೇಳೆ ಇರಡೂ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಘೋಷಣೆ ಕೂಗಿದರು. ಈ ವೇಳೆ ಪ್ರತಿಪಕ್ಷದ ಸದಸ್ಯರು ಮಾತನಾಡಲು ಸ್ಥಳದಲ್ಲೇ ವೈರ್ಲೆಸ್ ಮೈಕ್ ತರಿಸಿಕೊಂಡರು. ಅದು ಆನ್ ಆಗದಿದ್ದಾಗ ಮನಪಾ ಸದಸ್ಯ ರವೂಫ್ ಮೈಕ್ ಅನ್ನು ನೆಲಕ್ಕೆ ಕುಟ್ಟಿದರು. ಆಗ ಮೈಕ್ ತುಂಡಾದಾಗ ಆಡಳಿತ ಪಕ್ಷದ ಸದಸ್ಯರು ಮತ್ತೆ ಗದ್ದಲ ಎಬ್ಬಿಸಿದರು. ಕಾಂಗ್ರೆಸ್ ಸದಸ್ಯರು ಇಲ್ಲೂ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯೆ ಶಕೀಲ ಕಾವ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು. ಬಳಿಕ ಮೇಯರ್ ಸಭೆಯನ್ನು ಮೊಟಕುಗೊಳಿಸಿ ಎದ್ದು ನಡೆದರು.
ಮತ್ತೊಮ್ಮೆ ಸಭೆ ಆರಂಭಗೊಂಡಾಗಲೂ ಎರಡೂ ಪಕ್ಷಗಳ ಸದಸ್ಯರು ಬಾವಿಗಿಳಿದು ಗದ್ದಲ ಎಬ್ಬಿಸಿದರು. ಇದರ ನಡುವೆಯೇ ಮೇಯರ್ ಅನುಮತಿ ಮೇರೆಗೆ ಕಾರ್ಯಸೂಚಿ ಸ್ಥಿರೀಕರಣ ಅನುಮೋದನೆ ಮಾಡಲಾಯಿತು. ಈ ವೇಳೆ ವಿಪಕ್ಷವನ್ನು ಗಣನೆಗೆ ತೆಗೆದುಕೊಂಡಿಲ್ಲವೆಂದು ವಿಪಕ್ಷ ಸದಸ್ಯರು ಆರೋಪಿಸಿದರು. ಒಟ್ಟಿನಲ್ಲಿ ಇಂದಿನ ಸಾಮಾನ್ಯ ಸಭೆ ಗದ್ದಲದಲ್ಲಿಯೇ ಅಂತ್ಯಗೊಂಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಸ್ ಮೇಲೆ ಕಲ್ಲು ತೂರಾಟ: ಮೂವರ ಬಂಧನ - Stones Pelted On Bus