ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧದ 'ಗೋ ಬ್ಯಾಕ್ ಶೋಭಾ' ಅಭಿಯಾನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಶನಿವಾರ ಸಚಿವೆ ತಿರುಗೇಟು ನೀಡಿದ್ದಾರೆ.
"ನಿಜವಾದ ಬಿಜೆಪಿ ಕಾರ್ಯಕರ್ತ, ನಮ್ಮ ವಿಚಾರಧಾರೆಯಿಂದ ಬಂದವರು ಯಾರೂ ಕೂಡಾ ಈ ರೀತಿಯ ಕೆಲಸ ಮಾಡಲ್ಲ. ಆದರೆ ಅಧಿಕಾರಕ್ಕಾಗಿ ಮಾತ್ರ ಬರುವವರು, ಅಧಿಕಾರಕ್ಕಾಗಿ ವಾಪಸ್ ಹೋಗುವವರು ಇಂಥದ್ದನ್ನೆಲ್ಲ ಮಾಡುತ್ತಾರೆ. ಆ ಪಾರ್ಟಿಯಲ್ಲಿ ಮಾಡಿರುವುದು ಅವರಿಗೆ ರೂಢಿಯಲ್ಲಿರುತ್ತದೆ. ಅದೇ ವ್ಯಕ್ತಿ ಈ ಜಿಲ್ಲೆಯಲ್ಲೂ ಪೋಸ್ಟ್ ಮಾಡಿದ್ದಾರೆ. ಯಾರೋ ಸ್ಪಾನ್ಸರ್ ಮಾಡಿ ಇದನ್ನು ಮಾಡುತ್ತಿರುವುದು ಸ್ಪಷ್ಟವಾಗಿದೆ. ವಿರೋಧ ಪಕ್ಷವಿರಲಿ, ನಮ್ಮ ಪಕ್ಷವಿರಲಿ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯಾಗಬೇಕು. ಲೋಕಸಭಾ ಕ್ಷೇತ್ರದಲ್ಲಿ ಚರ್ಚೆಯಾಗಬೇಕು" ಎಂದರು.
ಲೋಕಸಭೆ ಚುನಾವಣೆಯ ಕಾವು ನಿಧಾನವಾಗಿ ಜಿಲ್ಲೆಯಲ್ಲಿ ಏರತೊಡಗಿದೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿದ ಶೋಭಾ ಕರಂದ್ಲಾಜೆ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ರಾಜ್ಯ ಸರ್ಕಾರದ ಭವಿಷ್ಯದ ಕುರಿತು ಮಾತನಾಡುತ್ತಾ, "ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಏನು ಬೇಕಾದರೂ ಆಗಬಹುದು. ಅದನ್ನು ಊಹೆ ಕೂಡ ಮಾಡಲಾಗದು. ಕಾಂಗ್ರೆಸಿಗರಲ್ಲಿ ಸಾಕಷ್ಟು ಗೊಂದಲವಿದೆ. ಅದು ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: 'ಕಾಂಗ್ರೆಸ್ಸಿಗರು ನಿಜವಾದ ಜಾತ್ಯತೀತರಾಗಿದ್ರೆ ಹುಂಡಿ ಕಳ್ಳರಾಗ್ತಿರ್ಲಿಲ್ಲ': ಸಿ ಟಿ ರವಿ