ಹುಬ್ಬಳ್ಳಿ : ಧಾರವಾಡ ಲೋಕಸಭಾ ಚುನಾವಣೆಯ ಮತದಾನ ನಿನ್ನೆಯಷ್ಟೇ ಪೂರ್ಣಗೊಂಡಿದ್ದು, ಈಗ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಿಲ್ಯಾಕ್ಸ್ ಮೂಡ್ನಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು.
ಸುದೀರ್ಘ ಒಂದು ತಿಂಗಳ ಕಾಲ ಪ್ರಚಾರ, ಸಭೆ, ಸಮಾರಂಭ ಎಂದು ಬ್ಯುಸಿಯಾಗಿದ್ದ ಕೇಂದ್ರ ಸಚಿವ ಜೋಶಿಯವರು ಇಂದು ಹೆಂಡತಿ, ಮಕ್ಕಳು, ಮೊಮ್ಮಕ್ಕಳ ಜೊತೆಗೆ ಮನೆಯಲ್ಲಿ ಜಾಲಿ ಮೂಡಿನಲ್ಲಿದ್ದಾರೆ. ರಾಜಕೀಯ ಜಂಜಾಟದ ನಡುವೆ ಫ್ಯಾಮಿಲಿಗೆ ಟೈಮ್ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮತದಾನ ಮುಗಿದಿದ್ದು, ಇಂದು ಕುಟುಂಬಸ್ಥರ ಜೊತೆಗೆ ಹ್ಯಾಪಿ ಮೂಡಿನಲ್ಲಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಲೆಕ್ಕಾಚಾರಗಳು ಸ್ಪಷ್ಟವಾಗಿವೆ. ನನ್ನ ಕ್ಷೇತ್ರ ಸೇರಿದಂತೆ 14 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಐತಿಹಾಸಿಕ ಫಲಿತಾಂಶ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜನತಾ ಜನಾರ್ದನ, ದೇವರ ಆಶೀರ್ವಾದದಿಂದ ಪ್ರತಿ ಬಾರಿ ಮತಪ್ರಮಾಣ ಹೆಚ್ಚಾಗುತ್ತಿದೆ. ಈ ಬಾರಿನೂ ಹೆಚ್ಚಾಗಿದೆ. ನಮಗಾಗಿ ನೀವು ಕಾಯ್ದು ಸದ್ಭಾವನೆಯಿಂದ ವರ್ತಿಸಿದ್ದೀರಿ ಎಂದು ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದರು.
ಸುದೀರ್ಘವಾಗಿ ಓಡಿದಾಗ ದಣಿವಾಗುತ್ತದೆ. ನಿನ್ನೆ ಕೂಡ ಅನೇಕರನ್ನು ಭೇಟಿ ಮಾಡಿದೆ. ನಗು ನಗುತ್ತಲೇ ಚುನಾವಣೆ ಮುಗಿದಿದೆ. ಪ್ರಚಾರ ಮಾಡೋದಕ್ಕಿಂತ ಕಾಂಗ್ರೆಸ್ ಅಪಪ್ರಚಾರ ಮಾಡಿದ್ರು. ನೇರವಾಗಿ ಸೋಲಿಸಲಾಗದಾಗ ಈ ರೀತಿ ಮಾಡ್ತಾರೆ. ಕಾಂಗ್ರೆಸ್ನವರು ಎಸ್ಸಿ, ಎಸ್ಟಿ ಮೀಸಲಾತಿ ರದ್ದು ಮಾಡ್ತೇವೆ ಅಂತಾ ಫೇಕ್ ವಿಡಿಯೋ ಬಿಟ್ಟರು ಎಂದು ಜೋಶಿ ಹೇಳಿದರು.
ಷಡ್ಯಂತ್ರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಅದನ್ನು ಎದುರಿಸ್ತೇವೆ. ಷಡ್ಯಂತ್ರವನ್ನೂ ಜನ ಅರ್ಥ ಮಾಡಿಕೊಂಡಿದ್ದಾರೆ. ನಾನು ದೆಹಲಿಯಲ್ಲಿದ್ರೂ ಯಾರದ್ದು ಫೋನ್ ಕರೆ ಅವೈಡ್ ಮಾಡಲ್ಲ. ಜನಕ್ಕೆ ನಾನೇನು ಅಂತಾ ಗೊತ್ತು. ಕೆಲಸಗಳನ್ನು ಜನ ನೆನಪಿಟ್ಟುಕೊಂಡಿದ್ದಾರೆ ಎಂದರು.
ಕೆಲಸ ಆಗಿಲ್ಲ ಅಂತಾ ದ್ವೇಷದಿಂದ ಹೇಳಿದ್ದಾರೆ. ನನಗೆ ಸಂಪೂರ್ಣ ವಿಶ್ವಾಸ ಇದೆ. ಜನ ನನ್ನ ಕೈ ಬಿಡಲ್ಲ. ಅಭಿವೃದ್ಧಿ ಚರ್ಚೆಗೆ ಕಾಂಗ್ರೆಸ್ ಬರಲಿಲ್ಲ. ಈ ಚುನಾವಣೆ ಅಭಿವೃದ್ಧಿ ಮೇಲೆ ನಡೆದ್ರೆ ಬಿಜೆಪಿ ಮುನ್ನಡೆಯಲ್ಲಿ ಬರುತ್ತೆ ಅಂತಾ ಅವರಿಗೆ ಗೊತ್ತಿತ್ತು. ಅವರ ಕಾಲದಲ್ಲಿ ಭ್ರಷ್ಟಾಚಾರ ನಡೀತಿತ್ತು. ನಮ್ಮ ಸಮಯದಲ್ಲಿ ನಯಾ ಪೈಸಾ ಭ್ರಷ್ಟಾಚಾರ ಇಲ್ಲ. ನಮ್ಮಲ್ಲಿ ದಲ್ಲಾಳಿಗಳಿಗೆ ಅವಕಾಶ ಇಲ್ಲದಂತೆ ಮಾಡಿದ್ವಿ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಸರಿಯಾಗಿ ನಿಬಾಯಿಸಿದ್ರೆ ಎಲ್ಲೂ ವಿದ್ಯುತ್ ಕೊರತೆ ಆಗಲ್ಲ. ಅವರು ಅವರ ಪಕ್ಷದ ನಾಯಕರು ಕಳೆದ ಬಾರಿ ಅದನ್ನೇ ಹೇಳಿದ್ರು. ಸಿದ್ದರಾಮಯ್ಯ ನರೇಂದ್ರ ಮೋದಿಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿದ್ರು. 19ರಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಿಗೆ ಸ್ಪರ್ಧೆ ಮಾಡಿ ಎಲ್ಲವೂ ನಮ್ದೇ ಅಂದ್ರು. ಏನಾಯ್ತು ಹೆಸರಿಲ್ಲದಂತೆ ಆಯ್ತು ಎಂದು ಜೋಶಿ ಲೇವಡಿ ಮಾಡಿದ್ರು.
ಇದೇ ವೇಳೆ ಜೋಶಿಯವರ ಪತ್ನಿ ಜ್ಯೋತಿ ಜೋಶಿ ಮಾತನಾಡಿ, ಕಳೆದ ಐದು ವರ್ಷಗಳವರೆಗೆ ನಿರಂತರವಾಗಿ ಜನಸೇವೆ ಮಾಡಿದ್ದಾರೆ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಮಕ್ಕಳ ಜೊತೆ ಬೆರೆಯಲು ಸಾಧ್ಯವಾಗಿರಲಿಲ್ಲ. ಮಗಳು ಯಾವ ಕ್ಲಾಸ್ನಲ್ಲಿ ಓದುತ್ತಿದ್ದಾರೆ ಎಂಬುದನ್ನೇ ಮರೆತಿದ್ದಾರೆ ಎಂದರು. ಆಗ ಮಧ್ಯಪ್ರವೇಶ ಮಾಡಿದ ಜೋಶಿ ಈಗ ಹತ್ತನೇ ಕ್ಲಾಸ್ ನಲ್ಲಿ ಓದುತ್ತಿದ್ದಾಳೆ, ಅಷ್ಟು ಗೊತ್ತಿದೆ ಎಂದು ನಗೆಚಟಾಕೆ ಹಾರಿಸಿದರು.
ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮತದಾನ - Pralhad Joshi Casts Vote