ಮಂಡ್ಯ: ಮೈಸೂರಿನ ಇನಕಲ್ನಲ್ಲಿ ನಿವೇಶನ ಅಕ್ರಮವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಆರೋಪ ಮಾಡಿದರು.
ಮಂಡ್ಯದಲ್ಲಿಂದು ಮುಡಾ ಹಗರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನಕಲ್ನಲ್ಲಿ ನಿವೇಶನ ಅಕ್ರಮವಾಗಿದ್ದು ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಈ ಪ್ರಕರಣದ ಬಗ್ಗೆ ಕೋರ್ಟ್ ಆದೇಶವಾಗಿದೆ. ಮುಡಾ 14 ನಿವೇಶನದ ವಿಚಾರ ಬಿಡಿ. ನಾನು ಹೇಳುತ್ತಿರುವ ವಿಚಾರವೇ ಬೇರೆ. ಮೈಸೂರಿನ ಹಿನಕಲ್‌ನಲ್ಲಿ 1986ರಲ್ಲಿ 463 ಎಕರೆ ಜಮೀನು ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. 17/4 ಬೈಲಾ ತೆಗೆದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಯಾವಾಗಲೂ ಸತ್ಯಮೇವ ಜನತೆ ಅನ್ನುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಮ್ಮ ಎಂಬವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. 20 ದಿನದಲ್ಲಿ ಡಿನೋಟಿಫಿಕೇಷನ್ ಆಗುತ್ತದೆ. ನಂತರ ಅದನ್ನು ಸಿದ್ದರಾಮಯ್ಯ ಕೊಂಡುಕೊಂಡಿದ್ದಾರೆ. ಮುಡಾದಂತೆ ಇದೊಂದು ರೀತಿಯ ಹಗರಣ ಎಂದು ಗಂಭೀರ ಆರೋಪ ಮಾಡಿದರು.
ಸಿಎಟಿಬಿ ಬಗ್ಗೆ ನನ್ನಿಂದ ಆದೇಶ ಆಗಿದೆಯೇ? ಈ ಸಂಬಂಧ ನಾನು ಏನು ಅಂತ ಆಣೆ ಮಾಡಬೇಕು? ನನ್ನ ಮನೆಗೆ ಬಂದು ಚೆಕ್ ಮಾಡೋಕೆ ಏನಿದೆ? ಯಾವ ಡಾಕ್ಯುಮೆಂಟ್ ಚೆಕ್ ಮಾಡ್ತಾರೆ? ನಾನೇನಾದ್ರೂ ಆದೇಶ ಮಾಡಿದ್ದೀನಾ? ಸಿದ್ದರಾಮಯ್ಯ ಅವರಂತೆ ನಾನೇನು 14 ಸೈಟ್ ತಗೊಂಡಿದ್ದೀನಾ? ಸೈಟ್ ತಗೊಂಡಿರೋರು ಅವರು. ಆದರೆ, ನನ್ನ ಮೇಲೆ ಯಾಕೆ ಇಷ್ಟು ಲಘುವಾಗಿ ಮಾತಾಡ್ತೀರಿ? ಕೂತರೂ ನಿಂತರೂ ಅವರಿಗೆ ಕುಮಾರಸ್ವಾಮಿ ಮಾತ್ರ ಕಾಣ್ತಾರೆ. ಸರ್ಕಾರ ಇವತ್ತು ನನ್ನ ವಿರುದ್ಧ ತನಿಖೆ ಕೈಗೊಂಡಿದೆ. ಆದರೆ, ಯಾವುದೇ ಡ್ಯಾಕ್ಯೂಮೆಂಟ್ ಇಲ್ಲದೆ ನೀವು ಏನು ತನಿಖೆ ಮಾಡ್ತೀರಾ? ಇದರಲ್ಲೇ ಗೊತ್ತಾಗುತ್ತೆ ಕಳ್ಳತನ ಮಾಡ್ತಾ ಇರೋರು ಯಾರು ಅಂತಾ ಎಂದು ವಾಗ್ದಾಳಿ ನಡೆಸಿದರು.
ರಾಮನಗರದ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನವರು ಯಾವ ಅಭ್ಯರ್ಥಿಯನ್ನಾದ್ರೂ ಹಾಕಲಿ. ಗೆಲ್ಲುವುದಕ್ಕಾಗಿಯೇ ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು. ಎಲ್ಲರೂ ಸೋಲುತ್ತೇವೆ ಎಂದು ಚುನಾವಣೆ ನಡೆಸಲ್ಲ. ನಮಗೆ ನಮ್ಮ ಕಾರ್ಯಕರ್ತರೇ ಅಭ್ಯರ್ಥಿ. ನಮ್ಮ ಅಭ್ಯರ್ಥಿ ಎನ್‌ಡಿಎ ಎಂದು ಹೇಳಿದ್ದೇನೆ. ನಮ್ಮದು ಕೇವಲ ದೇವೇಗೌಡರ ಕುಟುಂಬ ಅಲ್ಲ. ನಮ್ಮದು ಈಗ ಎನ್‌ಡಿಎ ಕುಟುಂಬ. ಎನ್‌ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ. ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ ನಮ್ಮ ವಿರುದ್ಧ ದಾಖಲೆ ಹುಡುಕಿಸುತ್ತಿದ್ದಾರೆ, ಕೇಳಿದ್ದರೆ ನಾನೇ ಕೊಡುತ್ತಿದ್ದೆ: ಡಿಕೆಶಿ