ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗು ಜೆಡಿಎಸ್ ಒಟ್ಟಾಗಿ ಪ್ರಚಾರ ಕಾರ್ಯ ನಡೆಸಬೇಕು. ಪರಸ್ಪರ ಸಹಕಾರದ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಬಿಜೆಪಿ ಹಾಗು ಜೆಡಿಎಸ್ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ನಗರದ ತಾಜ್ ವೆಸ್ಟ್ ಎಂಡ್ನಲ್ಲಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಹಾಗು ಜೆಡಿಎಸ್ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ ಅಮಿತ್ ಶಾ ಅವರನ್ನು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಎದುರಾಗಿ ಸ್ವಾಗತ ಕೋರಿದರು. ಹೂಗುಚ್ಚ ನೀಡಿ ಬರಮಾಡಿಕೊಂಡರು. ಈ ವೇಳೆ ಕುಮಾರಸ್ವಾಮಿ ಅವರನ್ನು ನೋಡುತ್ತಿದ್ದಂತೆ ಅವರ ಅರೋಗ್ಯ ವಿಚಾರಿಸಿದ ಅಮಿತ್ ಶಾ "ಹೌ ಈಸ್ ಯುವರ್ ಹೆಲ್ತ್" ಎಂದು ಹಸ್ತಲಾಘವ ನೀಡಿ ಯೋಗಕ್ಷೇಮ ವಿಚಾರಿಸಿದರು.
ನಂತರ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಅಮಿತ್ ಶಾ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಉಭಯ ಪಕ್ಷಗಳ ನಾಯಕರ ಜೊತೆ ಸಮಾಲೋಚನೆ ನಡೆಸಿದ ಅಮಿತ್ ಶಾ, ಮೈತ್ರಿ ನಂತರ ಕೆಲವು ಕ್ಷೇತ್ರಗಳಲ್ಲಿ ವ್ಯಕ್ತವಾಗಿರುವ ಅಸಮಧಾನ ಮತ್ತು ಅದರ ನಿರ್ವಹಣೆ ಕುರಿತು ಚರ್ಚಿಸಿದರು. ಹಾಸನದಲ್ಲಿ ಪ್ರೀತಂ ಗೌಡ ತಂಡದಿಂದ ಜೆಡಿಎಸ್ ಅಭ್ಯರ್ಥಿಗೆ ವಿರೋಧ ಇರುವ ಕುರಿತು ಪ್ರಸ್ತಾಪವಾಯಿತು, ಪ್ರಜ್ವಲ್ ರೇವಣ್ಣ ಮೈತ್ರಿಕೂಟದ ಅಭ್ಯರ್ಥಿ ಹಾಗಾಗಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿ ಕೆಲಸ ಮಾಡಲಿದೆ ಸಣ್ಣಪುಟ್ಟ ಗೊಂದಲ ಸರಿಪಡಿಸಲಾಗುತ್ತದೆ ಯಾವುದೇ ಆತಂಕ ಬೇಡ ಎಂದು ಅಮಿತ್ ಶಾ ಭರವಸೆ ನೀಡಿದರು ಎನ್ನಲಾಗಿದೆ. ಈ ಸಂಬಂಧ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದರು ಎನ್ನಲಾಗಿದೆ.
ಇನ್ನು ಜೆಡಿಎಸ್ ನಾಯಕರನ್ನು ಕಡೆಗಣಿಸುವಂತಿಲ್ಲ, ಪ್ರಚಾರ ಕಾರ್ಯದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು, ಪರಸ್ಪರ ಒಟ್ಟಾಗಿ ಸಹಕಾರದಲ್ಲಿ ಮುಂದುವರೆಯೋಣ ಎನ್ನುವ ಸಂದೇಶ ನೀಡಿದರು ಎನ್ನಲಾಗಿದೆ. ಮುಕ್ತವಾಗಿ ಉಭಯ ಪಕ್ಷಗಳ ನಾಯಕರ ಜೊತೆ ಅಮಿತ್ ಶಾ ಸಮಾಲೋಚನೆ ನಡೆಸಿದರು.
ಬೆಳಗ್ಗೆ 8.45 ಕ್ಕೆ ಸಭೆ ನಿಗದಿಯಾಗಿದ್ದರೂ ಎರಡು ಗಂಟೆಯಷ್ಟು ತಡವಾಗಿ 11 ಗಂಟೆಗೆ ಆರಂಭವಾಯಿತು. ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದು ಒಗ್ಗಟ್ಟಿನ ಮಂತ್ರ ಜಪಿಸಲಾಯಿತು.
ಇದಕ್ಕೂ ಮುನ್ನ ಮಾಜಿ ಸಿಎಂ ಸದಾನಂದಗೌಡ ಕರೆಸಿಕೊಂಡ ಅಮಿತ್ ಶಾ ಒನ್ ಟು ಒನ್ ಚರ್ಚೆ ಮಾಡಿದರು. ಈ ಬಾರಿಯೂ ಟಿಕೆಟ್ ಆಕಾಂಕ್ಷಿ ಆಗಿದ್ದ ಸದಾನಂದಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮತ್ತೆ ಟಿಕೆಟ್ ಕೇಳಿದ್ದರು. ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಪುತ್ರ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದರು. ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಶುದ್ದೀಕರಣ ಮಾಡೋದಾಗಿ ಹೇಳಿಕೆ ನೀಡಿದ್ದರು. ಹಾಗಾಗಿ ಸದಾನಂದಗೌಡರ ಜೊತೆ ಚರ್ಚೆ ನಡೆಸಿದ ಅಮಿತ್ ಶಾ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದಾರೆ.
ದೇಶದ ಹಿತ, ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡ ನಿರ್ಧಾರಗಳನ್ನು ನಿಮ್ಮಂತಹ ಹಿರಿಯರು ಒಪ್ಪಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಂದಾಗಿರುವುದು ಕಾರ್ಯಕರ್ತರಲ್ಲಿ ಆತ್ಮಬಲ ತುಂಬುತ್ತದೆ. ಪ್ರತಿಯೊಬ್ಬರ ತ್ಯಾಗ ಮತ್ತು ಪರಿಶ್ರಮವನ್ನು ಪಕ್ಷ ಸದಾ ಗಮನದಲ್ಲಿಟ್ಟುಕೊಂಡಿರುತ್ತದೆ ಎಂಬ ಭರವಸೆ ಮಾತುಗಳನ್ನಾಡಿದರು ಎನ್ನಲಾಗಿದೆ.
ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಗೂಂಡಾ, ರೌಡಿ ಹೇಳಿಕೆ: ಯತೀಂದ್ರಗೆ ನೋಟಿಸ್ ಜಾರಿ - Notice to Yatindra