ಬೆಳಗಾವಿ: ಹೊಸ ರೈಲು ಮಾರ್ಗ, ಹಳಿಗಳ ಡಬ್ಲಿಂಗ್, ರೈಲಿನಲ್ಲಿ ಮೂಲಭೂತ ಸೌಕರ್ಯ ಸೇರಿ ಮತ್ತಿತರ ಅಭಿವೃದ್ಧಿ ಕೈಗೊಳ್ಳಲು ಬ್ರಿಟಿಷರ ಕಾಲದಿಂದಲೂ ರೈಲ್ವೆ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಇದನ್ನು ಸ್ಥಗಿತಗೊಳಿಸಿದ್ದಾರೆ. ಈ ಬಾರಿ ರೈಲಿಗೆ ಪ್ರತ್ಯೇಕ ಬಜೆಟ್ ಮಂಡಿಸಿ, ಬೆಳಗಾವಿ ಜಿಲ್ಲೆಯಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹೊಸ ರೈಲು ಮಾರ್ಗಗಳ ಅನುಷ್ಠಾನಕ್ಕೆ ರೈಲ್ವೆ ಹೋರಾಟಗಾರರು ಆಗ್ರಹಿಸಿದ್ದಾರೆ.
ದೇಶದ ಶೇ.70ರಷ್ಟು ಜನ ಸಂಪರ್ಕ ಸಾಧನವಾಗಿ ರೈಲನ್ನೆ ಬಳಸುತ್ತಾರೆ. ಕೋಟ್ಯಂತರ ಜನರ ಬದುಕಿಗೆ ರೈಲು ಆಧಾರಸ್ತಂಭವಾಗಿದೆ. ಮಧ್ಯಮ ವರ್ಗ, ಶ್ರೀಮಂತರು ಸೇರಿ ಬಹಳಷ್ಟು ಜನರಿಗೆ ರೈಲು ಜೀವನಾಡಿ ಆಗಿದೆ. ಆದರೆ, 28 ಸಕ್ಕರೆ ಕಾರ್ಖಾನೆ, ಪ್ರವಾಸಿತಾಣಗಳು ಮತ್ತು ಪ್ರಸಿದ್ಧ ದೇವಾಲಯಗಳನ್ನು ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ, ಕರ್ನಾಟಕ-ಗೋವಾ-ಮಹಾರಾಷ್ಟ್ರ ರಾಜ್ಯಗಳ ಸಂಪರ್ಕಕೊಂಡಿ. ಇಲ್ಲಿ ರೈಲ್ವೆ ಸಂಪರ್ಕ ಮಾತ್ರ ಅಷ್ಟಕ್ಕಷ್ಟೇ ಎನ್ನುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸಮೀಪದ ಮಹಾನಗರಗಳ ಸಂಪರ್ಕ ಸುಲಭ ಆದಷ್ಟು ಜಿಲ್ಲೆಯ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಹಾಗಾಗಿ, ಈ ಬಾರಿಯ ಬಜೆಟ್ನಲ್ಲಿಯಾದ್ರೂ ನಮ್ಮ ಭಾಗಕ್ಕೆ ನ್ಯಾಯ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.
ಆರು ಯೋಜನೆಗಳು ದಶಕದ ಬೇಡಿಕೆ: ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ, ಬೆಳಗಾವಿ-ಕಿತ್ತೂರು-ಧಾರವಾಡ, ಕುಡಚಿ-ಬಾಗಲಕೋಟೆ, ಬೆಳಗಾವಿ-ಕೊಲ್ಲಾಪುರ, ಬೆಳಗಾವಿ-ಸಾವಂತವಾಡಿ ಹಾಗೂ ಶೇಡಬಾಳ-ಅಥಣಿ-ವಿಜಯಪುರ ಮಾರ್ಗದ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ರೈಲು ಸೌಲಭ್ಯ ವಿಸ್ತರಿಸಬೇಕು ಎಂಬ ಹಲವು ದಶಕಗಳ ಬೇಡಿಕೆ ಕನಸಾಗೇ ಉಳಿದಿವೆ. 2019ರಲ್ಲಿ ಮಂಜೂರಾಗಿರುವ ಬೆಳಗಾವಿ-ಧಾರವಾಡ ನಡುವಿನ 73 ಕಿ.ಮೀ ಉದ್ದದ ಯೋಜನೆಗೆ ರೈಲ್ವೆ ಮಂಡಳಿಯಿಂದ 823 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಆದರೆ, ಭೂಸ್ವಾಧೀನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದ್ದು, ಇದೀಗ ಕಾಮಗಾರಿ ಮೊತ್ತ ಹೆಚ್ಚಳವಾಗುವ ಸಾಧ್ಯತೆ ಇದೆ.
ಉದ್ದೇಶಿತ ಯೋಜನೆಗಳಿಗೆ ಅಗತ್ಯ ಭೂಮಿ ಒದಗಿಸುವಲ್ಲಿ ರಾಜ್ಯ ಸರ್ಕಾರ ವಹಿಸುತ್ತಿರುವ ತಾತ್ಸಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರಂತರ ಹೋರಾಟಗಳ ಹೊರತಾಗಿಯೂ ಮಹತ್ವಾಕಾಂಕ್ಷೆಯ ಯೋಜನೆಗಳು ಅನುಷ್ಠಾನಕ್ಕೆ ಬರುವ ಲಕ್ಷಣ ಗೋಚರಿಸುತ್ತಿಲ್ಲ. ಬೆಳಗಾವಿ-ಕಿತ್ತೂರು-ಧಾರವಾಡ ಮಾರ್ಗದ ಯೋಜನೆಗೆ ರೈಲ್ವೆ ಇಲಾಖೆಯು ಮಂಜೂರಾತಿ ನೀಡಿ 5 ವರ್ಷಗಳೇ ಕಳೆದಿವೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಕಾಮಗಾರಿ ಆರಂಭಿಸಲು ಹಿನ್ನಡೆಯಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಜಿಲ್ಲೆಯ ಜನ ಒತ್ತಾಯಿಸುತ್ತಿದ್ದಾರೆ.
ಇನ್ನು, ಬೆಳಗಾವಿಯಿಂದ ಕೊಲ್ಲಾಪುರ ಮಾರ್ಗದ ಯೋಜನೆ ಸಮೀಕ್ಷೆಗೆ ಅನುಮೋದನೆ ಸಿಕ್ಕಿದೆ. ಅದಲ್ಲದೇ, ಬೆಳಗಾವಿ-ಸಾವಂತವಾಡಿ ಮಾರ್ಗದ ಯೋಜನೆ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಬಾಗಲಕೋಟೆ-ಕುಡಚಿ ಮಾರ್ಗದ 986 ಕೋಟಿ ರೂ.ಮೊತ್ತದ ಯೋಜನೆಗೆ 2010 ರಲ್ಲೇ ಅನುಮೋದನೆ ಸಿಕ್ಕಿದೆ. 1,530 ಕೋಟಿ ರೂ.ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಬಾಗಲಕೋಟೆಯಿಂದ ಲೋಕಾಪುರವರೆಗಿನ ಕಾಮಗಾರಿ ಪೂರ್ಣಗೊಂಡಿದೆ.
ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ರೈಲು ಮಾರ್ಗದಿಂದ ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗುವ ನಿರೀಕ್ಷೆ ಇದೆ. 97 ಕಿ.ಮೀ, 109 ಕಿ.ಮೀ ಹಾಗೂ 137 ಕಿ.ಮೀ ಹೀಗೆ ಮೂರು ಹಂತದಲ್ಲಿ 2019ರಲ್ಲಿಯೇ ಸಮೀಕ್ಷೆ ಮಾಡಲಾಗಿತ್ತು. 'ಪ್ರಸ್ತಾವಿತ ರೈಲು ಮಾರ್ಗದಲ್ಲಿ ಜನದಟ್ಟಣೆ ಇಲ್ಲದ ಕಾರಣ ಈ ಯೋಜನೆ ಆರ್ಥಿಕವಾಗಿ ಫಲದಾಯಕವಲ್ಲ' ಎಂದು ವರದಿ ನೀಡಿದ್ದರಿಂದ ಪ್ರಮುಖ ಯೋಜನೆ ನನೆಗುದಿಗೆ ಬಿದ್ದಿದೆ.
ಇನ್ನು ಉತ್ತರಕರ್ನಾಟಕ ಆರಾಧ್ಯ ದೈವ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ಒಂದೂವರೆ ಕೋಟಿಗೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ, ರೈಲು ಮಾರ್ಗ ಆರಂಭಿಸಿದರೆ ಪ್ರಯಾಣಿಕರ ಕೊರತೆ ಆಗುವುದಿಲ್ಲ. ಮತ್ತೊಮ್ಮ ಸಮೀಕ್ಷೆ ಮಾಡಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಅವರು ಇತ್ತೀಚೆಗಷ್ಟೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ದಿ.ಸುರೇಶ ಅಂಗಡಿ ಕನಸು : ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರು ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಯೋಜನೆ ರೂಪಿಸಿದ್ದರು. ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ಯೋಜನೆಗೆ ಒಪ್ಪಿಗೆಯನ್ನು ಕೊಟ್ಟಿತ್ತು. 73 ಕಿ.ಮೀ. ಉದ್ದದ ಈ ರೈಲು ಮಾರ್ಗವನ್ನು 2020-21ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50:50ರಂತೆ ವೆಚ್ಚವನ್ನು ಹಂಚಿಕೆ ಮಾಡಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. ಅಲ್ಲದೇ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿಯನ್ನು ನೀಡುತ್ತಿದೆ. ಈ ನೂತನ ರೈಲು ಮಾರ್ಗಕ್ಕೆ 927.42 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಯೋಜನೆಗಾಗಿ10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಭೂಸ್ವಾಧೀನ ಹಾಗೂ ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆಯಿಂದಾಗಿ ರೈಲುಮಾರ್ಗ ಯೋಜನೆ ವಿಳಂಬಗೊಳ್ಳುತ್ತಿದೆ.
ಈ ನೂತನ ನೇರ ರೈಲು ಮಾರ್ಗದಿಂದ ಧಾರವಾಡ-ಬೆಳಗಾವಿ ನಗರದ ನಡುವಿನ ರೈಲು ಪ್ರಯಾಣದ ಅವಧಿ 31 ಕಿ.ಮೀ. ಕಡಿಮೆಯಾಗಲಿದೆ. ಈಗ ಧಾರವಾಡದಿಂದ ಲೋಂಡಾ ಮೂಲಕ ಬೆಳಗಾವಿ ತಲುಪಬೇಕು. ಪ್ರಯಾಣದ ಅವಧಿ ಸುಮಾರು 4 ಗಂಟೆ. ನೇರ ರೈಲು ಮಾರ್ಗದಿಂದ ಸುಮಾರು 45 ನಿಮಿಷದಲ್ಲಿ ಸಂಚರಿಸಬಹುದಾಗಿದೆ.
ಶೇಡಬಾಳ-ಅಥಣಿ-ವಿಜಯಪುರ ಮಾರ್ಗದ ಯೋಜನೆ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದು 2010-11ನೇ ಸಾಲಿನ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿತ್ತು. ಆದರೆ, ದಶಕ ಕಳೆದರೂ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇನ್ನು ಈ ಕಾಮಗಾರಿಗಳಿಗೆ ಅನುಮೋದನೆ ಸಿಗುವುದು ವಿಳಂಬ ಆದಷ್ಟು ಕಾಮಗಾರಿ ವೆಚ್ಚ ಹೆಚ್ಚಾಗುತ್ತದೆ. ಅದು ಸರ್ಕಾರಕ್ಕೆ ಹೊರೆಯಾಗಲಿದೆ ಅನ್ನೋದು ಆರ್ಥಿಕ ತಜ್ಞರ ಅಭಿಪ್ರಾಯ.
ವಿಶೇಷ ಯೋಜನೆ ಅಂತಾ ಪರಿಗಣಿಸಿ : ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ಧೀನ್ ಖಾಜಿ ಮಾತನಾಡಿ, ಈ ಭಾಗದ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಹೋರಾಟ ಮಾಡುತ್ತಿದ್ದೇವೆ. ಅದರಲ್ಲಿ ಪ್ರಮುಖವಾಗಿ ಲೋಕಾಪುರ-ಧಾರವಾಡ ಮಾರ್ಗದಲ್ಲಿ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನ, ರಾಮದುರ್ಗದ ಶಬರಿಕೊಳ್ಳ, ಗೊಡಚಿ ವೀರಭದ್ರೇಶ್ವರ, ಸಿರಸಂಗಿ ಕಾಳಮ್ಮದೇವಿ ಸೇರಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಪ್ರತಿ ವರ್ಷ ಎರಡೂವರೇ ಕೋಟಿ ಜನರು ಓಡಾಡುತ್ತಾರೆ. ಅಲ್ಲದೇ ಈ ಪ್ರದೇಶದಲ್ಲಿ 12 ಸಕ್ಕರೆ ಕಾರ್ಖಾನೆಗಳು, 8 ಸಿಮೆಂಟ್ ಕಾರ್ಖಾನೆಗಳಿವೆ. ಹಾಗಾಗಿ, ರೈಲ್ವೆ ಇಲಾಖೆಗೆ ಸಾಕಷ್ಟು ಆದಾಯ ಬರಲಿದೆ. ಧಾರವಾಡ ಹೈಕೋರ್ಟ್, ಧಾರವಾಡ ವಿಶ್ವವಿದ್ಯಾಲಯ ಮತ್ತು ವಿವಿಧ ಕಾಲೇಜಗಳಿಗೆ ಹೋಗಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತದೆ. ವಾಣಿಜ್ಯ ನಗರಿ ಹುಬ್ಬಳ್ಳಿಗೆ ತೆರಳಲು ಬಾಗಲಕೋಟೆ, ವಿಜಯಪುರ ಜನತೆ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ. ಹಾಗಾಗಿ, ವಿಶೇಷ ಯೋಜನೆ ಎಂದು ಪರಿಗಣಿಸಿ ಬರುವ ಬಜೆಟ್‌ನಲ್ಲಿ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು. ಅದೇ ರೀತಿ ಸಿಎಂ ಸಿದ್ದರಾಮಯ್ಯ ಭೂಮಿ ನೀಡುವ ಕುರಿತು ಕೇಂದ್ರಕ್ಕೆ ಪತ್ರ ಬರೆಯಬೇಕು. ಎಲ್ಲಾ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇಲ್ಲದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಿ : ಬೆಳಗಾವಿ-ಕಿತ್ತೂರು-ಧಾರವಾಡ ನೇರ ರೈಲು ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ಸವಾಲಾಗಿದೆ. ಫಲವತ್ತಾದ ಭೂಮಿ ಬಿಟ್ಟು ಕೊಡಲು ರೈತರ ತಕರಾರಿದೆ. ಹಾಗಾಗಿ, ರೈತರನ್ನು ಮನವೊಲಿಸಿ, ಅವರ ನಿರೀಕ್ಷೆ ತಕ್ಕ ಪರಿಹಾರ ನೀಡಿ ಭೂಮಿ ಪಡೆಯಬೇಕಿದೆ. ಅದೇ ರೀತಿ ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ರೈಲು ಮಾರ್ಗ ಮಹತ್ವಾಕಾಂಕ್ಷಿ ಯೋಜನೆಗೂ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಅನುಮೋದನೆ ನೀಡುವ ನಿರೀಕ್ಷೆ ಇದೆ. ಆ ನಿಟ್ಟಿನಲ್ಲಿ ಕರ್ನಾಟಕದ ಎಲ್ಲಾ ಸಂಸದರು ಪಕ್ಷಾತೀತವಾಗಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕು. ತಮಿಳುನಾಡು, ಕೇರಳ ಸಂಸದರಂತೆ ರಾಜ್ಯದ ಅಭಿವೃದ್ಧಿ ಸಂಬಂಧ ಎಲ್ಲಾ ಪಕ್ಷಗಳ ಸಂಸದರು ಒಗ್ಗಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರುವಂತೆ ರೈಲ್ವೆ ಹೋರಾಟಗಾರ ಅಶೋಕ ಚಂದರಗಿ ಒತ್ತಾಯಿಸಿದರು.
ಬ್ರಿಟಿಷರ ಕಾಲದಿಂದಲೂ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತ್ಯೇಕ ರೈಲ್ವೆ ಬಜೆಟ್ ಸ್ಥಗಿತಗೊಳಿಸಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಯಾಕೆಂದರೆ ದೇಶದ ಜನಸಂಖ್ಯೆಯ ಶೇ.70ರಷ್ಟು ಜನ ರೈಲು ಪ್ರಯಾಣವನ್ನೆ ಅವಲಂಬಿಸಿದ್ದಾರೆ. ಹಾಗಾಗಿ, ಮತ್ತೆ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಬೇಕು. - ಕುತುಬುದ್ಧೀನ್ ಖಾಜಿ, ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ
ಕಿತ್ತೂರು ಮಾರ್ಗವಾಗಿ ಧಾರವಾಡ ಸಂಪರ್ಕಿಸುವ ಪ್ರದೇಶದಲ್ಲಿ ಬಾಕಿ ಉಳಿದಿರುವ ಶೇ.5ರಿಂದ 10ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ನಮ್ಮ ಮನವಿ ಸ್ಪಂದಿಸಿದ ರೈಲ್ವೆ ಸಚಿವರು ಲೋಕಾಪುರ-ಸವದತ್ತಿ-ಧಾರವಾಡ ಯೋಜನೆ ಬಗ್ಗೆ ಮರು ಸಮೀಕ್ಷೆ ನಡೆಸುವ ಭರವಸೆ ನೀಡಿದ್ದಾರೆ. - ಜಗದೀಶ ಶೆಟ್ಟರ್, ಬೆಳಗಾವಿ ಸಂಸದರು
ಇದನ್ನೂ ಓದಿ: ಈ ಬಾರಿಯ ಕೇಂದ್ರ ಬಜೆಟ್‌ಲ್ಲಿ ಸಿಗುತ್ತಾ ಶಿವಮೊಗ್ಗ to ಚನ್ನಗಿರಿ ರೈಲು ಯೋಜನೆಗೆ ಗ್ರೀನ್ ಸಿಗ್ನಲ್? - UNION BUDGET 2025