ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಯೂನಿಯನ್ ಬ್ಯಾಂಕ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ ಬ್ಯಾಂಕ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ವೆಂಕಟರಮಣಿ, "ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ ಸೆಕ್ಷನ್ 35(ಎ) ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ಗಳ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ, ಬ್ಯಾಂಕ್ಗಳ ತಪ್ಪುಗಳನ್ನು ಪರಿಶೀಲನೆ ನಡೆಸಲಿದೆ. ಪ್ರಕರಣ ಸಂಬಂಧ ಪಾರದರ್ಶಕ ತನಿಖೆ ನಡೆಸಬೇಕಾಗಿದ್ದು, ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಯಿಂದ ನಡೆಸಬೇಕಾಗಿದೆ. ಬ್ಯಾಂಕ್ಗಳ ಮೂಲಕ 50 ಕೊಟಿಗೂ ಹೆಚ್ಚು ರೂ.ಗಳ ಅವ್ಯವಹಾರ ನಡೆದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧೀನದ ಸಿಬಿಐ ತನಿಖೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ."
"ಈ ನಡುವೆ ಕೇಂದ್ರ ಸರ್ಕಾರ, ಆರ್ಬಿಐ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಯ ಮುಂದೆ ಬಂದು ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಿ ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಸಾರ್ವಜನಿಕ ವಲಯದ ಬ್ಯಾಂಕ್, ಖಾಸಗಿ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು ಆರ್ಬಿಐ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಈ ರೀತಿಯಲ್ಲಿ ದೇಶಾದ್ಯಂತ ಸಾವಿರಾರು ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಬಂಧ ಹಗರಣವನ್ನು ಕೇಂದ್ರ ಸರ್ಕಾರದ ಅಧೀನದ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕಾಗಿದೆ" ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು.