ಉಡುಪಿ: ಕಳೆದ 10 ವರ್ಷಗಳಿಂದ ಉಡುಪಿ ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ನಾಯಿ 'ಐಕಾನ್' ಸೇವಾ ನಿವೃತ್ತಿ ಹೊಂದಿದೆ. ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಶ್ವಾನ 2014ರ ಆಗಸ್ಟ್ 5ರಂದು ಜನಿಸಿತ್ತು. ಅದೇ ವರ್ಷದ ನವೆಂಬರ್ 5ರಂದು ಪೊಲೀಸ್ ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿತ್ತು.
ಐಕಾನ್ಗೆ 2015ರ ಆಗಸ್ಟ್‌ವರೆಗೆ ಅಂದರೆ ಸುಮಾರು 9 ತಿಂಗಳ ಕಾಲ ಸಿಎಆರ್ ಸೌತ್ ಆಡುಗೋಡಿಯಲ್ಲಿ ಸ್ಫೋಟಕ ಪತ್ತೆ ಕುರಿತಂತೆ ಕಠಿಣ ತರಬೇತಿ ನೀಡಲಾಗಿತ್ತು. ಬಳಿಕ ಉಡುಪಿ ಹಾಗೂ ಹೊರ ಜಿಲ್ಲೆಗಳಲ್ಲಿ ಸುಮಾರು 417ಕ್ಕೂ ಹೆಚ್ಚು ಸಂದರ್ಭಗಳಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದೆ.
ಈ ಶ್ವಾನವು ಉಡುಪಿ ಹಾಗೂ ಹೊರ ಜಿಲ್ಲೆಗಳಿಗೆ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು, ವಿದೇಶಿ ಗಣ್ಯರು ಹಾಗೂ ಗಣ್ಯಾತಿಗಣ್ಯರು ಆಗಮಿಸಿದ ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸಿದೆ. ಜೊತೆಗೆ, ಏರ್ ಶೋ, ಜಿ-20 ಶೃಂಗಸಭೆ, ದತ್ತ ಜಯಂತಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಫೋಟಕ ಪತ್ತೆ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿತ್ತು.
ಅಲ್ಲದೇ, ಜಿಲ್ಲೆಯಲ್ಲೇ ನಡೆದ ಸಾಗರ ಕವಚ ಹಾಗೂ ಪ್ರತಿನಿತ್ಯದ ಕರ್ತವ್ಯದಲ್ಲಿ ಮಲ್ಪೆ ಬಂದರು, ಕಾಪು ಲೈಟ್‌ಹೌಸ್, ಮಣಿಪಾಲ ಯೂನಿವರ್ಸಿಟಿ, ರೈಲ್ವೇ ನಿಲ್ದಾಣ, ನಾಗಾರ್ಜುನ, ಮೈಸೂರು ದಸರಾ, ನ್ಯಾಷನಲ್ ನಾರ್ಕೋಟಿಕ್ಸ್ ಕಾನ್ಸರೆನ್ಸ್ ಬ್ರಹ್ಮಾವರದಲ್ಲಿ ಕಚ್ಚಾ ಬಾಂಬ್ ಪತ್ತೆ ಇತ್ಯಾದಿ ಸಂದರ್ಭಗಳಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಯಶಸ್ವಿ ಕರ್ತವ್ಯ ನಿರ್ವಹಣೆ ಮಾಡಿದೆ.
2020ರ ಫೆಬ್ರವರಿಯಲ್ಲಿ ನಡೆದ ಪೊಲೀಸ್ ಕರ್ತವ್ಯ ಕೂಟದಲ್ಲಿ ಐಕಾನ್ ಬೆಳ್ಳಿ ಪದಕ ಗೆದ್ದು ಉಡುಪಿ ಜಿಲ್ಲೆ ಹಾಗೂ ಪೊಲೀಸ್ ಇಲಾಖೆಗೆ ಗೌರವ ತಂದು ಕೊಟ್ಟಿದೆ. ಐಕಾನ್‌ನ ತರಬೇತುದಾರ ಹಾಗೂ ನಿರ್ವಾಹಕ (ಹ್ಯಾಂಡ್ಲರ್) ಆಗಿ ಗಣೇಶ ಎಂ. ಕರ್ತವ್ಯ ನಿರ್ವಹಿಸಿದ್ದರು.
ಶ್ವಾನದ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ., ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಉಪಾಧೀಕ್ಷಕ ತಿಮ್ಮಪ್ಪ ಗೌಡ ಜಿ., ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನಿರೀಕ್ಷಕ ಎಸ್. ರವಿಕುಮಾರ್ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ಬಂದಾಗಿನಿಂದಲೂ ವಿದ್ಯುತ್ತನ್ನೇ ಕಾಣದ ಗ್ರಾಮವಿದು: ಯಾವುದಾ ಊರು? - Village without electricity