ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ.
ಮಳೆಯ ಮಧ್ಯೆಯೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗ ಸಮುದಾಯದ ಮಕ್ಕಳು, ಮಹಿಳೆಯರು, ವೃದ್ಧರು ಧರಣಿ ನಡೆಸುತ್ತಿದ್ದು, ಅಲ್ಲೇ ಮಧ್ಯಾಹ್ನ ಮತ್ತು ರಾತ್ರಿಯ ಅಡುಗೆಯನ್ನು ತಯಾರಿಸಿ, ಊಟ ಮಾಡಿ ಧರಣಿ ಮುಂದುವರೆಸಿದ್ದಾರೆ. ಸುಮಾರು 100 ಮಂದಿ ರಾತ್ರಿ ವೇಳೆ ಧರಣಿ ಸ್ಥಳದಲ್ಲಿ ಉಳಿದುಕೊಂಡು ತಮ್ಮ ಹೋರಾಟ ನಡೆಸುತ್ತಿದ್ದಾರೆ.
ಬೇಡಿಕೆ ಈಡೇರುವವರೆಗೂ ಹೋರಾಟ: ''ನಮ್ಮ ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿ ಆಗುವ ತನಕ ಹೋರಾಟವನ್ನು ಮಾಡುತ್ತಿರುತ್ತೇವೆ. ಬೇಡಿಕೆಗಳನ್ನು ಈಡೇಸುವ ತನಕ ಹೋರಾಟ ನಿಲ್ಲಿಸಲಾರೆವು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕು, ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯವರೆಗೂ ತಲುಪಿಸಬೇಕು'' ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ - ಕೇರಳ ಅಧ್ಯಕ್ಷೆ ಸುಶೀಲಾ ನಾಡ ಆಗ್ರಹಿಸಿದರು.
''ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸುವವರೆಗೆ ಹೋರಾಟ ಮುಂದುವರೆಸಲಾಗುವುದು. ನಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಮುಖ್ಯಮಂತ್ರಿ ಜೊತೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವೆ ಸ್ಥಳಕ್ಕೆ ಬರಬೇಕು'' ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ಅಧ್ಯಕ್ಷೆ ಸುಶೀಲಾ ನಾಡ ಒತ್ತಾಯಿಸಿದರು.