ಉಡುಪಿ: ತಡರಾತ್ರಿ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ರಿಟ್ಜ್ ಕಾರು ಬೆಂಕಿಗಾಹುತಿಯಾಗಿದೆ. ಸಂಬಂಧಪಟ್ಟ ವಾಹನದ ಮಾಲಿಕ ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದ್ದರು. ಕಾರಿನ ಬಾನೆಟ್ನಲ್ಲಿ ಹೊಗೆಯನ್ನ ಕಂಡು ಕಾರು ಮಾಲಿಕ ಹೊರ ಬಂದಿದ್ದಾರೆ. ಆ ವೇಳೆಯಲ್ಲಿಯೇ ಕಾರಿನ ಒಳಗಡೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕೆನ್ನಾಲೆಗೆಯಿಂದ ಕಾರು ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಕಾರು ಮಾಲೀಕನ ಮಾಹಿತಿ ಮೇಲೆ ಸ್ಥಳಕ್ಕಾಗಮಿಸಿದ ಉಡುಪಿಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು: ಬಸ್ ಚಲಾಯಿಸುತ್ತಿದ್ದ ವೇಳೆ ಏಕಾಏಕಿ ಚಾಲಕ ಅಸ್ವಸ್ಥಗೊಂಡ ಪರಿಣಾಮ ಬಸ್ ಹಿಂದಕ್ಕೆ ಚಲಿಸಿದೆ. ಈ ವೇಳೆ, ಬಸ್ ರಸ್ತೆ ಬದಿಯ ಮೋರಿ ತಾಗಿ ನಿಂತ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ಗುರುವಾರ ಸಂಜೆ ನಡೆದಿದೆ.
ಉಡುಪಿಯಿಂದ ಭೈರಂಜೆ ಕಡೆಗೆ ಚಲಿಸುತ್ತಿದ್ದ ಸಿಟಿ ಬಸ್ ಕೆಳ ಪರ್ಕಳ ಬಳಿ ತಲುಪಿದ ವೇಳೆ ಚಾಲಕನಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ. ಈ ವೇಳೆ ಚಾಲಕನ ಕೈಯಿಂದ ಸ್ಟೇರಿಂಗ್ ತಪ್ಪಿ ಹಿಂಬಂದಿಗೆ ಚಲಿಸಿ ರಸ್ತೆ ಪಕ್ಕದ ಮೋರಿ ಬಳಿ ನಿಂತಿದೆ. ಈ ವೇಳೆ, ಬಸ್ನಲ್ಲಿದ್ದ ಕೆಲವು ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡ ಚಾಲಕ ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯರ ಸಹಕಾರದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವೇಳೆ ಬಸ್ನ ಹಿಂದೆ ವಾಹನ ಸವಾರರು ಇಲ್ಲದೇ ಇದ್ದುದರಿಂದ ಹಾಗೂ ಬಸ್ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಬಸ್ ಮೇಲಕ್ಕೆ ಎತ್ತಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು