ಮೈಸೂರು: ಅತ್ತೆಯ ಮಗಳ ಆತ್ಮಹತ್ಯೆಯಿಂದ ಮನನೊಂದ ಯುವಕ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಮೈಸೂರಿನಲ್ಲಿ ಸಾವಿನಲ್ಲೂ ಪ್ರೇಮಿಗಳು ಒಂದಾಗಿದ್ದಾರೆ. ಮೃತರನ್ನು ಮೋನಿಕಾ (20) ಮತ್ತು ಮನು (22) ಎಂದು ಗುರುತಿಸಲಾಗಿದೆ.
ಮೈಸೂರಿನ ಮಂಡಕಳ್ಳಿಯ ನಿವಾಸಿ ನಾಗರಾಜು ಮತ್ತು ಮಂಜುಳಾ ದಂಪತಿ ಪುತ್ರಿ ಮೋನಿಕಾ ಅವರನ್ನು ಮನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು. ಪ್ರೀತಿಗೆ ಎರಡು ಕುಟುಂಬದವರು ಒಪ್ಪಿದಲ್ಲದೇ ಮದುವೆ ಮಾಡಲು ಸಹ ಸಿದ್ಧರಾಗಿದ್ದರು. ಮನು ಅವರು ಮುರುಗೇಶ್ ಅವರ ಪುತ್ರ. ಇವರು ಜ್ಯೋತಿ ನಗರದ ಎಂಸಿಸಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಮೋನಿಕಾ ಕೂಡ ದಟ್ಟಗಳ್ಳಿಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ನೆಲೆಸಿದ್ದರು.
ಬುಧವಾರ ರಾತ್ರಿ ಮೋನಿಕಾ ಮತ್ತು ಮನು ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳವಾಗಿದ್ದು, ಇದರಿಂದ ಮನನೊಂದ ಮೋನಿಕಾ ಕೆಲಸ ಮಾಡುತ್ತಿದ್ದ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಹೊತ್ತಾದರೂ ಕೋಣೆಯಿಂದ ಮೋನಿಕಾ ಹೊರ ಬಾರದೇ ಇರುವುದನ್ನ ಗಮನಿಸಿ ಮನೆ ಮಾಲೀಕರು ಮೋನಿಕಾ ಅವರ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೋನಿಕಾ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಮನು ಕೂಡ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ವೈದ್ಯರು ಮೋನಿಕಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದರಿಂದ ಮನನೊಂದು ಮನೆಗೆ ಬಂದ ಮನು ಕೂಡ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ಕುವೆಂಪು ನಗರ ಮತ್ತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಯಮತ್ತೂರಿನಿಂದ ಮೈಸೂರಿಗೆ ಬಂದು ಆತ್ಮಹತ್ಯೆ: ಮೈಸೂರಿನ ಶಾಂತಿನಗರ ನಿವಾಸಿ ಲಲಿತ ಮಹಲ್ ರಸ್ತೆಯಲ್ಲಿರುವ ಎಸ್‌ಐಯುಡಿ (ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಡೆವೆಲಪ್‌ಮೆಂಟ್)ಯಲ್ಲಿ ಪರಿಸರ ಎಂಜಿನಿಯರ್ ಆಗಿದ್ದ ಯಾದವ ಕುಮಾರ್ (49) ಹೋಟೆಲ್‌ನ ಕೊಠಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಪತಿಯ ಸಾವಿಗೆ ಕೊಯಮತ್ತೂರು ನಗರ ಕಮಿಷನರ್ ಕಾರಣ’ ಎಂದು ಆರೋಪಿಸಿ ಪತ್ನಿ ರಶ್ಮಿ ಅವರು ಲಷ್ಕರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಯಾದವ್ ಕಳೆದ 9 ವರ್ಷದಿಂದ ಎಸ್‌ಐಯುಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದಾರೆ. ಕೆಲ ಸಮಯದ ಬಳಿಕ ಅವರ ಮೊಬೈಲ್ ಫೋನ್ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮಂಗಳವಾರ ಅವರ ತಮ್ಮ ಪ್ರಭು ಹುಡುಕಾಟ ನಡೆಸುತ್ತಿದ್ದಾಗ ನಗರದ ಖಾಸಗಿ ಹೋಟೆಲ್ ಮುಂಭಾಗ ಅವರ ಬೈಕ್ ನಿಂತಿದ್ದನ್ನು ಗಮನಿಸಿದ್ದರು. ಅಲ್ಲಿ ವಿಚಾರಿಸಿದಾಗ ಅವರಿದ್ದ ಕೊಠಡಿ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿದೆ. ಪೊಲೀಸರ ನೇತೃತ್ವದಲ್ಲಿ ಬಾಗಿಲು ಒಡೆದು ನೋಡಿದಾಗ ವಿಷ ಸೇವಿಸಿ ಮೃತಪಟ್ಟಿದ್ದು ತಿಳಿದುಬಂದಿದೆ. ಅವರ ಸಾವಿಗೆ ಕಮಿಷನರ್ ಕಾರಣ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಕೊಯಮತ್ತೂರು ಕಮಿಷನರ್ ವಿರುದ್ಧ ದೂರು ದಾಖಲಾಗಿದೆ. ಆದರೆ ಅವರು ಯಾವ ಇಲಾಖೆಯವರು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ತನಿಖೆ ಮುಂದುವರೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.