ಶಿವಮೊಗ್ಗ: ಕಂದಾಯ ಹಾಗೂ ಅರಣ್ಯ ಭೂಮಿ ಒತ್ತುವರಿ ಪ್ರತ್ಯೇಕ ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಇಬ್ಬರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಬಳಿಕೆಯಾದ ಜಮೀನನ್ನು ವಶಕ್ಕೆ ಪಡೆಯಲು ಆದೇಶಿಸಿದೆ.
ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ಸರ್ವೆ ನಂಬರ್ 19ರ ಸರ್ಕಾರಿ ಭೂಮಿಯನ್ನು ಇದೇ ಗ್ರಾಮದ ಚನ್ನಯ್ಯ ಎಂಬುವರು 25 ಗುಂಟೆ ಹಾಗೂ ಬಸಪ್ಪ ಎಂಬವರು 36 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಶಿಕಾರಿಪುರ ತಹಶೀಲ್ದಾರ್ಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ತಾಲೂಕು ಆಡಳಿತವು ಮೊದಲು ತನಿಖೆ ಪ್ರಾರಂಭಿಸಿತ್ತು.
ರಾಜ್ಯ ಸರ್ಕಾರ ಸ್ಥಾಪಿಸಿದ ಭೂ ಒತ್ತುವರಿ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಇಬ್ಬರಿಗೂ ತಲಾ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ರೂ ದಂಡ ವಿಧಿಸಿದೆ. ಸದ್ಯ ಇಬ್ಬರು ಸಹ ಹೈಕೋರ್ಟ್ಗೆ ಮೇಲ್ಮವಿ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಸಪ್ಪನವರಿಗೆ 90 ವರ್ಷ ವಯಸ್ಸಾಗಿದ್ದು, ಶಿಕ್ಷೆಗೆ ಗುರಿಯಾಗಿದ್ದಾರೆ.
ಈ ಕುರಿತು ಬಸಪ್ಪನವರ ಪುತ್ರ ಅಯ್ಯಣ್ಣ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿ, "ನಮ್ಮ ತಂದೆ ಅವರಿಗೆ ಸರ್ಕಾರ ಟೆನೆಂಟ್ ಯೋಜನೆಯಡಿಯಲ್ಲಿ 3 ಎಕರೆ ಭೂಮಿಯನ್ನು ಬಹಳ ಹಿಂದೆಯೇ ಮಂಜೂರು ಮಾಡಿತ್ತು. ಅಲ್ಲಿಂದ ಇಲ್ಲಿಯತನಕ ಈ ಭೂಮಿಯನ್ನು ನಮ್ಮ ತಂದೆ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಭೂಮಿಯಲ್ಲಿ 6 ಗುಂಟೆ ಭೂಮಿಯನ್ನು ರಸ್ತೆಗೆ ಬಿಟ್ಟು ಕೊಟ್ಟಿದ್ದೇವೆ. ನಾವು ನಮ್ಮ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದೇವೆ. ನಮ್ಮ ಭೂಮಿ ಕೆಳಗೆ ಬಹಳಷ್ಟು ಜನ ಒತ್ತುವರಿ ಮಾಡಿಕೊಂಡಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಳ್ಳದೇ ನಮ್ಮನ್ನು ಮಾತ್ರ ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ಭೂ ಒತ್ತುವರಿ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದೇವೆ" ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಶಿವಮೊಗ್ಗ ತಾಲೂಕು ಬಿಕ್ಕೋನಹಳ್ಳಿ ಗ್ರಾಮದ ಚಂದ್ರಪ್ಪ(50) ಎಂಬವರು ಬಿಕ್ಕೋನಹಳ್ಳಿ ಗ್ರಾಮದ ಸರ್ವೆ ನಂಬರ್ 9 ರ ಕುಂಚೇನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 1 ಎಕರೆ 20 ಗುಂಟೆ ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದರೆಂದು ಶಂಕರ ವಲಯದ ಗೆಜ್ಜೆನಹಳ್ಳಿಯ ಉಪ ಅರಣ್ಯಾಧಿಕಾರಿಗಳು 2019ರಲ್ಲಿ ಭೂ ಕಬಕಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುತ್ತಾರೆ. ಇದರ ವಿಚಾರಣೆ ನಡೆದಾಗ ಚಂದ್ರಪ್ಪ ಭೂಮಿ ಒತ್ತುವರಿ ಮಾಡಿಕೊಂಡಿದ್ದು ಸಾಬೀತಾದ ಹಿನ್ನಲೆಯಲ್ಲಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ, 10 ಸಾವಿರ ರೂ ದಂಡ, ದಂಡ ಪಾವತಿಸಲು ವಿಫಲವಾದರೆ 3 ತಿಂಗಳ ಕಾಲ ಶಿಕ್ಷೆ ಪ್ರಕಟಿಸಿದೆ.
ಇದನ್ನೂ ಓದಿ: ಶಿವಮೊಗ್ಗ: ಹೊತ್ತಿ ಉರಿದ ಆಯನೂರಿನ ಬೇಕರಿ - Fire In Bakery