ಉಡುಪಿ: ಕೋಟೇಶ್ವರ ಸಮೀಪದ ಬೀಜಾಡಿ ಅಮಾಸೆಕಡುವಿನ ಎಂಬಲ್ಲಿ ಸಮುದ್ರಕ್ಕೆ ಈಜಲು ತೆರಳಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ ಕುಂದಾಪುರದ ಅಜಯ್(25) ಹಾಗೂ ಬೆಂಗಳೂರಿನ ಸಂತೋಷ್ (25) ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಮೋಕ್ಷಿತ್ ಹಾಗೂ ಶ್ರೇಯಸ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ನೇಹಿತರ ಪೈಕಿ ಓರ್ವನ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಕಾರಣ ಇವರು ಬೆಂಗಳೂರಿನಿಂದ ಅ.25ರಂದು ಕುಂದಾಪುರಕ್ಕೆ ಆಗಮಿಸಿದ್ದರು. ಅ.25ರ ರಾತ್ರಿ ಬ್ರಹ್ಮಾವರದಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ, ರಾತ್ರಿ ಬೀಜಾಡಿಯ ಕಡಲ ತೀರದಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅ.26ರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಬೀಜಾಡಿಯ ಬೀಚ್‌ಗೆ ನಾಲ್ವರು ಈಜಲು ತೆರಳಿದ್ದಾರೆ.
ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಅಜಯ್ ಹಾಗೂ ಸಂತೋಷ್ ನೀರಲ್ಲಿ ಕೊಚ್ಚಿ ಹೋಗಿದ್ದು ಅದೃಷ್ಟವಶಾತ್ ಮೋಕ್ಷಿತ್ ಹಾಗೂ ಶ್ರೇಯಸ್ ಅವರನ್ನು ಅಲ್ಲಿದ್ದ ಸ್ಥಳೀಯರು ರಕ್ಷಿಸಿದರು. ಸಂತೋಷ್ ಮೃತದೇಹ ಬೆಳಗ್ಗೆಯೇ ಸಿಕ್ಕಿದ್ದು, ಅಜಯ್‌ಗೆ ಸಮುದ್ರದಲ್ಲಿ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಹುಡುಕಾಟ ನಡೆಸಲಾಯಿತು. ಆದರೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮೃತದೇಹ ಘಟನೆ ನಡೆದ ಸ್ಥಳದ ಸ್ವಲ್ಪ ದೂರದ ಕಡಲಿನಲ್ಲಿ ಪತ್ತೆಯಾಗಿದೆ.
ಅಜಯ್ ಅವರ ಮಾವ ಆನಗಳ್ಳಿಯ ನಿವಾಸಿ ಪ್ರಕಾಶ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ನಂಜಪ್ಪ, ಎಎಸ್‌ಐ ಸುರೇಶ್ ಭಟ್ ಹಾಗೂ ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಪಿಎಸ್‌ಐ ಸುಬ್ರಹ್ಮಣ್ಯ ಅಗ್ನಿಶಾಮಕ ದಳ ಸಿಬ್ಬಂದಿ, ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರವಾಸಿಗರಿಗೆ ಎಚ್ಚರಿಕೆ ಅಗತ್ಯ: ಕಡಲ ತಡಿಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಸಮುದ್ರಕ್ಕೆ ಈಜಲು ತೆರಳುವುದರಿಂದ ನೀರು ಪಾಲಾಗುತ್ತಿರುವುದು ಕಂಡುಬಂದಿದೆ. ಹೊರಭಾಗದಿಂದ ಬರುವ ಪ್ರವಾಸಿಗರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಇತ್ತೀಚೆಗಷ್ಟೇ ತಿಪಟೂರು ಮೂಲದ ಯುವಕನೋರ್ವ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನಡೆದಿತ್ತು.
ಇದನ್ನೂ ಓದಿ:ರಾಯಚೂರು: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು