ಮಂಗಳೂರು: ಒಡಿಶಾದಿಂದ ಮಂಗಳೂರು ನಗರ ಹಾಗೂ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಬೊಲೆರೋ ವಾಹನದ ಮೂಲಕ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಂದ 120 ಕೆ.ಜಿ ಮಾಲು ವಶಕ್ಕೆ ಪಡೆಯಲಾಗಿದೆ. ವಯನಾಡು ಜಿಲ್ಲೆಯ ವೈತಿರಿ ತಾಲೂಕಿನ ಚೂರಮಲ ಗ್ರಾಮದ ಅನೂಪ್ ಎಂ.ಎಸ್.(28), ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲೂಕಿನ ಪಡಿಯೂರು ಗ್ರಾಮದ ಲತೀಪ್ ಕೆ.ವಿ.(36) ಬಂಧಿತರು.
ಫೆ.6ರಂದು ಮಂಗಳೂರು ನಗರಕ್ಕೆ ಒಡಿಶಾದಿಂದ ಆರೋಪಿಗಳು ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್.ಎಂ. ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಉಳ್ಳಾಲದ ಪಿಲಿಕೂರು ಎಂಬಲ್ಲಿ ದಾಳಿ ಮಾಡಿದ್ದಾರೆ. ವಶಕ್ಕೆ ಪಡೆದ ಮಾದಕ ದ್ರವ್ಯದ ಅಂದಾಜು ಮೌಲ್ಯ 28 ಲಕ್ಷ ರೂ ಆಗಿದ್ದು, 3 ಮೊಬೈಲ್, 4,020 ನಗದು ವಶಪಡಿಸಿಕೊಳ್ಳಲಾಗಿದೆ.
ಗಾಂಜಾ, ಬೊಲೆರೋ ಜೀಪು, ಮೊಬೈಲ್ಗಳ ಒಟ್ಟು ಮೌಲ್ಯ 35,14,520 ರೂ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಒಡಿಶಾದಿಂದ ಅಂಧ್ರ, ಬೆಂಗಳೂರು ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಕಳ್ಳ ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ವಾಹನದ ಡಿಕ್ಕಿಯಲ್ಲಿ ಪ್ರತ್ಯೇಕವಾದ ಒಂದು ಕಬ್ಬಿಣದ ಬಾಕ್ಸ್ ಮಾಡಿಕೊಂಡಿದ್ದರು. ಈ ಬಾಕ್ಸ್‌ನಲ್ಲಿ ಮಾದಕ ದ್ರವ್ಯ ಬಚ್ಚಿಟ್ಟಿದ್ದರು. ಬೃಹತ್ ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಅನೂಪ್ ಎಂಬಾತನ ವಿರುದ್ಧ ಈ ಹಿಂದೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಅಲ್ಲದೇ ವಯನಾಡಿನ ಮೆಪ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ, ಕಲ್ಪೆಟ್ಟ ಪೊಲೀಸ್ ಠಾಣೆಯಲ್ಲಿ 2 ದರೋಡೆ ಪ್ರಕರಣ, ಒಂದು ಹಲ್ಲೆ ಪ್ರಕರಣ, ವಯನಾಡು ಜಿಲ್ಲೆಯ ಅಂಬಲವಯಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣಗಳು ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್ಐಗಳಾದ ರಾಜೇಂದ್ರ ಬಿ., ನರೇಂದ್ರ, ಸುದೀಪ್, ಶರಣಪ್ಪ ಭಂಡಾರಿ ಹಾಗೂ ಎಎಸ್ಐ ಯವರಾದ ಮೋಹನ್ ಕೆ.ವಿ., ಶೀನಪ್ಪ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: 10ನೇ ತರಗತಿ ವಿದ್ಯಾರ್ಥಿ ಹತ್ತಿರ ಗಾಂಜಾ ಪತ್ತೆ: 6ನೇ ತರಗತಿ ವಿದ್ಯಾರ್ಥಿಗಳ ಬಳಿಯೂ ಸಿಕ್ತು ಡ್ರಗ್ಸ್!