ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಆನೆಗಳು ಶುಕ್ರವಾರ ರಾತ್ರಿ ದಿಢೀರ್ ಕಾದಾಟಕ್ಕೆ ಇಳಿದು ಅರಮನೆಯಿಂದ ಹೊರಬಂದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಳೆ ಕಾರಣ ಆನೆಗಳಿಗೆ ಅರಮನೆ ಆವರಣದಲ್ಲೇ ತಾಲೀಮು ನಡೆಸಲಾಗಿತ್ತು. ನಂತರ ರಾತ್ರಿ 7.45ರ ಸಮಯದಲ್ಲಿ ಧನಂಜಯ್ ಹಾಗೂ ಕಂಜನ್ ಆನೆಗಳ ನಡುವೆ ಗುದ್ದಾಟ ಶುರುವಾಗಿತ್ತು. ರಾತ್ರಿ ಊಟ ಮಾಡುವ ವೇಳೆ ಈ ಗಲಾಟೆ ಆರಂಭವಾಗಿತ್ತು. ಪರಿಣಾಮ ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡಿಕೊಂಡು ಹೊರಬಂದಿವೆ. ಮಾವುತನಿಲ್ಲದೆ ಕಂಜನ್ ಆನೆಯನ್ನು ಅರಮನೆಯಿಂದ ಧನಂಜಯ್ ಆನೆ ಹೊರಗೆ ಓಡಿಸಿಕೊಂಡು ಬಂದಿತ್ತು. ಇದರಿಂದ ಕೆಲಕಾಲ ಜನ, ಮಾವುತರು, ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು.
ಬೆಚ್ಚಿಬಿದ್ದ ಜನ: ಆನೆಗಳು ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿಹೋದರು. ತಕ್ಷಣ ಮಾವುತರು ಹಾಗೂ ಅಧಿಕಾರಿಗಳ ಸಮಯಪ್ರಜ಼್ಞೆಯಿಂದ ಭಾರಿ ಅನಾಹುತ ತಪ್ಪಿತು. ಹೊರಗೆ ಬಂದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಅರಮನೆ ಆವರಣದೊಳಗೆ ಕರೆದೊಯ್ದರು. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಈ ವೇಳೆ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಪ್ರಭುಗೌಡ ಮಾತನಾಡಿ, "ಅರಮನೆ ಆವರಣದಲ್ಲಿ ಧನಂಜಯ್ ಹಾಗೂ ಕಂಜನ್ ನಡುವೆ ಜಗಳ ನಡೆದ ಪರಿಣಾಮ ಎರಡು ಆನೆಗಳು ಆಚೆ ಬಂದಿದ್ದವು. ಸಿಬ್ಬಂದಿ ಹಾಗೂ ಮಾವುತರ ಸಮಯದ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಇದೀಗ ಆನೆಗಳೆರಡನ್ನು ಕರೆದುಕೊಂಡು ಬಂದಿದ್ದು, ಶಾಂತವಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ಲಾರಿ ತಡೆದು ಕಬ್ಬು ಸವಿದ ಗಜರಾಜ: ವಿಡಿಯೋ - Elephant Stops Truck Eat Sugarcane